ಪಾಕಿಸ್ತಾನ ಸಮ್ಮಿಶ್ರ ಸರಕಾರದಿಂದ ಹೊರನಡೆದಿದ್ದ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ಅವರು ಸರಕಾರಕ್ಕೆ ಹಿಂತಿರುಗುವಂತೆ ಮತ್ತು ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿಪಿಪಿ ವಿರುದ್ಧದ ಅಭ್ಯರ್ಥಿಯನ್ನು ಹಿಂತೆಗೆಯುವಂತೆ ಪಿಪಿಪಿ ಪಕ್ಷ ಮಾಡಿರುವ ಮನವಿಯನ್ನು ನವಾಜ್ ಶರೀಫ್ ತಿರಸ್ಕರಿಸಿದ್ದಾರೆ.
ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷರ ಅಧಿಕಾರವನ್ನು ರದ್ದುಗೊಳಿಸಬೇಕು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪದಚ್ಯುತಗೊಂಡ ನ್ಯಾಯಾಧೀಶರನ್ನು ಪುನರ್ನೇಮಕಗೊಳಿಸಬೇಕು ಎಂಬ ಬೇಡಿಕೆಯನ್ನು ಶರೀಫ್ ಪಿಪಿಪಿ ಪಕ್ಷದ ಮುಂದಿಟ್ಟಿದ್ದಾರೆ.
ಶರೀಫ್ ಅವರು ಸರಕಾರದಿಂದ ಹೊರನಡೆದ ಬೆನ್ನಲ್ಲೇ ಜರ್ದಾರಿ ಕ್ಷಮಾಪತ್ರವನ್ನು ನೀಡಿ ಸರಕಾರಕ್ಕೆ ಹಿಂತಿರುಗುವಂತೆ ಶರೀಫ್ ಅವರನ್ನು ದೂರವಾಣಿ ಮೂಲಕ ಆಹ್ವಾನಿಸಿದ್ದರು. ಆದರೆ, ಶರೀಫ್ ಈ ಆಹ್ವಾನವನ್ನು ತಿರಸ್ಕರಿಸುವ ಮೂಲಕ ಜರ್ದಾರಿ ಅವರ ಮನವೊಲಿಕೆ ಪ್ರಯತ್ನವು ವಿಫಲಗೊಂಡಿದೆ.
ಜರ್ದಾರಿ ಆಹ್ವಾನಕ್ಕೆ ಶರೀಫ್ ಧನ್ಯವಾದ ಹೇಳಿದ್ದರೂ, ಭವಿಷ್ಯದಲ್ಲಿ ಪಿಪಿಪಿಯೊಂದಿಗೆ ತಮ್ಮು ಪಕ್ಷವು ಕೈಜೋಡಿಸುವುದಿಲ್ಲ ಎಂಬುದನ್ನು ಶರೀಫ್ ಸ್ಪಷ್ಟಪಡಿಸಿರುವುದಾಗಿ ಪಿಎಂಎಲ್-ಎನ್ ನಾಯಕ ಆಶನ್ ಇಕ್ಬಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಧ್ಯಕ್ಷೀಯ ಸ್ಥಾನಕ್ಕೆ ಪಿಪಿಪಿ ವಿರುದ್ಧ ಸ್ಪರ್ಧಿಸುತ್ತಿರುವ ಪಿಎಂಎಲ್-ಎನ್ ಅಭ್ಯರ್ಥಿ ಸೈಯೀದ್-ಉಜ್-ಜಮನ್ ಸಿದ್ಧಿಕ್ ಅವರನ್ನು ಹಿಂತೆಗೆಯುವಂತೆ ಜರ್ದಾರಿ ಶರೀಫ್ ಅವರಿಗೆ ಮನವಿ ಮಾಡಿರುವುದಾಗಿ ಇಕ್ಬಾಲ್ ಇದೇ ವೇಳೆ ತಿಳಿಸಿದರು.
ಏತನ್ಮಧ್ಯೆ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳಾದ ಜರ್ದಾರಿ, ಪಿಎಂಎಲ್-ಎನ್ ಪಕ್ಷದ ಸಿದ್ಧಿಕ್ ಮತ್ತು ಪಿಎಂಎಲ್-ಕ್ಯೂ ಪಕ್ಷದ ಮುಷಾಹಿದ್ ಹುಸೈನ್ ಸೈಯದ್ ಅವರ ನಾಮಪತ್ರವನ್ನು ಪಾಕಿಸ್ತಾನ ಚುನಾವಣಾ ಆಯೋಗವು ಅಂಗೀಕರಿಸಿದೆ.
|