ಈ ವಾರಾಂತ್ಯದಲ್ಲಿ ನ್ಯೂಜೆರ್ಸಿಯಲ್ಲಿ ನಡೆಯಲಿರುವ ವಿಶ್ವ ಗುಜರಾತಿ ಸಮಾವೇಶದಲ್ಲಿ ಭಾಗವಹಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ಅಂಗೀಕರಿಸಲಾಗಿಲ್ಲ ಎಂದು ಅಮೆರಿಕ ದೃಢಪಡಿಸಿರುವುದಾಗಿ ನರಮೇಧ ವಿರೋಧ ಒಕ್ಕೂಟ(ಸಿಎಜಿ) ಸ್ಪಷ್ಟಪಡಿಸಿದೆ.
ನರೇಂದ್ರ ಮೋದಿ ಅವರಿಗೆ ವೀಸಾ ನೀಡುವುದರ ವಿರುದ್ಧ ಡೆಮಕ್ರಟಿಕ್ ಕಾನೂನು ನಿರ್ಮಾಪಕರು ಜುಲೈ ಎಂಟರಂದು ದೂರು ಸಲ್ಲಿಸಿದ್ದು, ಶಾಸಕಾಂಗ ವ್ಯವಹಾರಗಳ ಸಹಾಯಕ ರಾಜ್ಯಾಂಗ ಕಾರ್ಯದರ್ಶಿ ಮ್ಯಾಥ್ಯೂ ರೆನಾಲ್ಡ್ ಇದಕ್ಕೆ ಉತ್ತರಿಸಿದ್ದರು.
"ನಿಮ್ಮ ಆತಂಕವನ್ನು ರಾಜ್ಯಾಂಗ ಇಲಾಖೆಯು ಪರಿಗಣಿಸಿದ್ದು, ಮೋದಿ ಅವರು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಹೊಂದಿರುವ ಅರಿವು ನಮಗಿದೆ" ಎಂದು ರೇನಾಲ್ಡ್ ತಮ್ಮ ಉತ್ತರದಲ್ಲಿ ತಿಳಿಸಿದ್ದು, 2002ರ ಗುಜರಾತ್ ಹಿಂಸಾಚಾರದ ಸಂದರ್ಭದಲ್ಲಿ ಅಮೆರಿಕ ಮತ್ತು ಕೆನಡಾವು ರಚಿಸಿದ್ದ ನರಮೇಧ ವಿರೋಧಿ ಒಕ್ಕೂಟ(ಸಿಎಜಿ) ಇದರ ಪ್ರತಿಗಳನ್ನು ವಿತರಿಸಿತ್ತು.
ಇಲಾಖೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಮೋದಿ ಅವರಿಗೆ ಪ್ರಸಕ್ತ ಯಾವುದೇ ವಲಸೇತರ ಅರ್ಜಿಗಳಿಲ್ಲ, ಅದೇನಿದ್ದರೂ, ಅಂತಹ ಯಾವುದೇ ಅರ್ಜಿ ಸ್ವೀಕರಿಸಿದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತಿನಲ್ಲಿನ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಸುಮಾರು 32 ಕಾನೂನು ನಿರ್ಮಾಪಕರು ಆತಂಕಗೊಂಡಿದ್ದು, ಮೋದಿ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸುವಂತೆ ಒತ್ತಾಯಿಸಿದ್ದಾರೆ ಎಂಬುದಾಗಿ ಸಿಎಜಿ ತಿಳಿಸಿದೆ.
|