ಗಾಳಿ ಮಳೆಯೊಂದಿಗೆ ಭಾರೀ ವಿನಾಶ ಉಂಟು ಮಾಡಲಿರುವ ಚಂಡಮಾರುತ ಗುಸ್ತವ್ ಸೋಮವಾರ ಬೆಳಿಗ್ಗೆ ಅಮೆರಿಕದ ಕರಾವಳಿಯತ್ತ ತನ್ನ ಪ್ರತಾಪ ಆರಂಭಿಸಿರುವುದಾಗಿ ಹವಾಮಾನ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಅಂಗವಾಗಿ 'ಕಿಲ್ಲರ್ ಚಂಡಮಾರುತ' ದ ಅಪಾಯದಿಂದ ಪಾರಾಗಲು ಲೂಸಿಯಾನದ ಸುಮಾರು ಎರಡು ಮಿಲಿಯನ್ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಈ ಪ್ರಮಾಣದಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿರುವುದು ಅಮೆರಿಕದ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ್ದಾಗಿದೆ. ಅಲ್ಲದೇ ಎಲ್ಲಾ ತೈಲೋತ್ಪನ್ನ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿಯಿಂದ ಆರಂಭಗೊಂಡಿರುವ ಬಿರುಗಾಳಿ ಮತ್ತು ಮಳೆಯಿಂದಾಗಿ ಪೂರ್ವಭಾಗದ ನ್ಯೂ ಒರ್ಲೆನ್ಸ್‌ನಲ್ಲಿ ವಿದ್ಯುತ್ ಅನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ಮೆಕ್ಸಿಕೋ ಮತ್ತು ನ್ಯೂ ಒರ್ಲೆನ್ಸ್ ಕರಾವಳಿ ಪ್ರದೇಶದ ಸಾವಿರಾರು ಮಂದಿ ತಮ್ಮ ಜೀವ ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಕರಾವಳಿ ಪ್ರದೇಶ ದಲ್ಲಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡುವ ಮೊದಲೇ ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ.
ಮಿಸಿಸಿಪ್ಪಿಯ ಡೆಲ್ಟಾ ಪ್ರದೇಶದಲ್ಲಿ ಬಡಿದಪ್ಪಳಿಸಿರುವ ಬಿರುಗಾಳಿ ಹಾಗೇ ಮುಂದುವರಿದು ನ್ಯೂ ಒರ್ಲೆನ್ಸ್‌ನತ್ತ ಧಾವಿಸುತ್ತಿರುವುದಾಗಿ ರಾಡಾರ್ ಮೂಲಕ ಪತ್ತೆ ಹಚ್ಚಿರುವುದಾಗಿ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
|