ಚೀನಾದ ನೈರುತ್ಯ ಭಾಗದ ಸಿಚುವಾನ್ ಮತ್ತು ಯುನ್ನಾನ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ 27ಮಂದಿ ಬಲಿಯಾಗಿದ್ದು, 180,000ಕ್ಕೂ ಅಧಿಕ ಮನೆಗಳು ಧ್ವಂಸ ಗೊಂಡಿದ್ದು, 800,000ಕ್ಕೂ ಅಧಿಕ ನಿವಾಸಿಗಳಿಗೆ ಹಾನಿಯಾಗಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ಶನಿವಾರದಂದು ಭಾರತೀಯ ಕಾಲಮಾನ 4.30ರ ಸುಮಾರಿಗೆ ಈ ಭೂಕಂಪ ಸಂಭವಿಸಿತ್ತು. ಸಿಚುವಾನ್ ಗಡಿಭಾಗದ ಪಾನ್‌ಜಿಹುವಾ ಪ್ರದೇಶದಲ್ಲಿ ಘಟನೆ ನಡೆದಿರುವುದಾಗಿ ಅಮೆರಿಕ ಭೂಗರ್ಭಶಾಸ್ತ್ರ ಇಲಾಖಾ ಅಧಿಕಾರಿಗಳು ತಿಳಿಸಿದ್ದು, ಭೂಕಂಪ ಹತ್ತು ಕಿಲೋ ಮೀಟರ್ ವ್ಯಾಪ್ತಿಯವರೆಗೆ ಸಂಭವಿಸಿರುವುದಾಗಿ ಹೇಳಿದೆ.
ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿರುವುದಾಗಿ ಯುಎಸ್‌ಜಿಸ್ (ಅಮೆರಿಕ ಭೂಗರ್ಭಶಾಸ್ತ್ರ ಸಮೀಕ್ಷೆ ) ತಿಳಿಸಿದ್ದರೆ, ಚೀನಾದ ಅಧಿಕೃತ ಕಚೇರಿಯ ಕ್ಸಿಹುವಾ ವರದಿ ಪ್ರಕಾರ ಭೂಕಂಪದ ತೀವ್ರತೆ 6.1ರಷ್ಟು ಆಗಿದೆ.
ಭೂಕಂಪದಲ್ಲಿ 350 ಮಂದಿ ಗಾಯಗೊಂಡಿದ್ದು, ಮೂರು ಮಂದಿ ನಾಪತ್ತೆಯಾಗಿದ್ದು, 27ಮಂದಿ ಸಾವನ್ನಪ್ಪಿರುವುದಾಗಿ ಕ್ಸಿಹುವಾ ವರದಿ ತಿಳಿಸಿದೆ.
ಶನಿವಾರ ಸಂಭವಿಸಿದ ಭೂಕಂಪದಿಂದಾಗಿ 800,000 ಅಧಿಕ ಜನರು ತೊಂದರೆಗೆ ಒಳಗಾಗಿದ್ದು , 40 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ 180,000ಕ್ಕೂ ಅಧಿಕ ಮನೆಗಳು ಧ್ವಂಸವಾಗಿರುವುದಾಗಿ ವರದಿ ಹೇಳಿದೆ.
|