ಪಾಕಿಸ್ತಾನ ಮತ್ತೆ ದ್ವೇಷ ರಾಜಕಾರಣಕ್ಕೆ ತಿರುಗತೊಡಗಿದ್ದು, ಇದೀಗ ರಾಜಕೀಯ ಬಿಕ್ಕಟ್ಟು ಉಲ್ಭಣಗೊಳ್ಳುತ್ತಿ ರುವಂತೆಯೇ,ಪಾಕ್‌ನ ವಿವಾದಿತ ಭ್ರಷ್ಟಾಚಾರ ವಿರೋಧಿ ಕಾವಲು ಸಮಿತಿ ಮಂಗಳವಾರದಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಾಬಾಜ್ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮತ್ತೆ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಆಡಳಿತರೂಢ ಪಿಪಿಪಿ ಸರ್ಕಾರಕ್ಕೆ ಪಿಎಂಎಲ್ (ನವಾಜ್) ಪಕ್ಷ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಕೇವಲ ಒಂಬತ್ತು ದಿನಗಳಲ್ಲಿಯೇ ಷರೀಫ್ ಹಾಗೂ ಸಹೋದರರ ಮೇಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ ನೀಡುವ ಎಲ್ಲಾ ಸಿದ್ಧತೆಗಳು ನಡೆದಿದೆ.
ಆ ನಿಟ್ಟಿನಲ್ಲಿ ಪಾಕ್‌ನ ಭ್ರಷ್ಟಾಚಾರ ವಿರೋಧಿ ಬ್ಯೂರೋ ಇದೀಗ ಷರೀಫ್ ವಿರುದ್ಧದ ಎಲ್ಲಾ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದೆ.
ಆದರೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಷರೀಫ್ ಸಹೋದರರು ಕೂಡಲೇ ಯಾವುದೇ ಪ್ರತಿಕ್ರಿಯೆ ನೀಡಲು ಲಭ್ಯರಾಗಿಲ್ಲ ಎಂದು ಮಾಧ್ಯಮ ವರದಿ ತಿಳಿಸಿದೆ.
ಕಳೆದ ತಿಂಗಳು ರಾವಲ್ಪಿಂಡಿ ಭ್ರಷ್ಟಾಚಾರ ವಿರೋಧಿ ವಿಚಾರಣಾ ನ್ಯಾಯಾಲಯ ತಾಂತ್ರಿಕ ಕಾರಣಗಳನ್ನು ನೀಡಿ ಷರೀಫ್ ಸಹೋದರರ ಮೇಲಿನ ಪ್ರಕರಣದ ವಿಚಾರಣೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿತ್ತು.
|