ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಆಶಾವಾದ ತೊರೆಯಲು ಸಿದ್ಧವಿಲ್ಲದ ಅಮೆರಿಕ, ಸೆ.4, 5ರಂದು ವಿಯೆನ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತಕ್ಕೆ ಪರಮಾಣು ವ್ಯವಹಾರದಲ್ಲಿ ವಿನಾಯಿತಿ ದೊರಕಿಸಿಕೊಡಲು ಪರಮಾಣು ಪೂರೈಕೆ ಗುಂಪು (ಎನ್ಎಸ್‌ಜಿ) ರಾಷ್ಟ್ರಗಳೊಂದಿಗೆ ರಾಜತಾಂತ್ರಿಕವಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ.

ನಾವು ಈ ಗುಂಪಿನ ರಾಷ್ಟ್ರಗಳೊಂದಿಗೆ ಹಾಗೂ ಈ ದೇಶಗಳ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಒಪ್ಪಂದವು ಸುಲಲಿತವಾಗಿ ಮುಂದುವರಿಯುವಂತಾಗಲು ಪ್ರಯತ್ನಿಸುತ್ತೇವೆ ಎಂದು ಅಮೆರಿಕ ರಾಜ್ಯಾಂಗ ಇಲಾಖೆ ವಕ್ತಾರ ಸಿಯಾನ್ ಮೆಕರ್ಮಕ್ ತಿಳಿಸಿದ್ದಾರೆ. ಸೆಪ್ಟೆಂಬರ್ 4 ಹಾಗೂ 5ರಂದು ವಿಯೆನ್ನಾದಲ್ಲಿ ಎನ್‌ಎಸ್‌ಜಿ ಸಭೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪ್ರಯತ್ನ ತೀವ್ರಗೊಳಿಸಿದೆ.

ನಾವು ಆಸೆ ಕೈಬಿಟ್ಟಿಲ್ಲ. ನಮಗೆ ಅತ್ಯಂತ ಕ್ಲಿಷ್ಟಕರ ಗಡುವುಗಳ ಸರಣಿಯೇ ಎದುರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಾಷ್ಟ್ರಗಳಿಂದ ಆಕ್ಷೇಪ ಬಂದಿದ್ದ ಹಿನ್ನೆಲೆಯಲ್ಲಿ, ಭಾರತಕ್ಕೆ ಪೂರ್ಣ ವಿನಾಯಿತಿ ನೀಡುವ ಕುರಿತು ಕಳೆದ ತಿಂಗಳು ನಡೆದ 45 ರಾಷ್ಟ್ರಗಳ ಎನ್ಎಸ್‌ಜಿ ಸಭೆಯಲ್ಲಿ ಒಮ್ಮತ ಏರ್ಪಟ್ಟಿರಲಿಲ್ಲ. ಗುರುವಾರ ಅಮೆರಿಕದ ಪರಿಷ್ಕೃತ ಕರಡಿನ ಮೇಲೆ ಎನ್ಎಸ್‌ಜಿ ಸಭೆಯಲ್ಲಿ ಚರ್ಚೆಯಾಗಲಿದೆ.

ಈ ಬಾರಿ ವಿಯೆನ್ನಾದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವವರು, ಅಮೆರಿಕದ ಮೂರನೇ ಪ್ರಮುಖ ರಾಜನೀತಿಜ್ಞ, ರಾಜಕೀಯ ವ್ಯವಹಾರ ಇಲಾಖೆಯ ಅಧೀನ ಕಾರ್ಯದರ್ಶಿ ವಿಲಿಯಮ್ ಬರ್ನ್ಸ್. ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆ ವಿಭಾಗದ ಅಧೀನ ಕಾರ್ಯದರ್ಶಿ ಜಾನ್ ರೂಡ್ ಕೂಡ ಬರ್ನ್ಸ್ ಜತೆಗಿರುತ್ತಾರೆ.

ಈ ಒಪ್ಪಂದವು ಜಾಗತಿಕ ಅಣ್ವಸ್ತ್ರ ಪ್ರಸರಣ ತಡೆ ಪ್ರಯತ್ನಗಳಿಗೆ ಪೂರಕವಾಗಿದೆ ಎಂದು ಇತರ ರಾಷ್ಟ್ರಗಳ ಮನವೊಲಿಸಲು ಅಮೆರಿಕವು ಪ್ರಯತ್ನಿಸುತ್ತದೆ ಎಂದು ಹೇಳಿರುವ ಮೆಕರ್ಮಕ್, ಎನ್ಎಸ್‌ಜಿಯಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾರೆ.
ಮತ್ತಷ್ಟು
ಷರೀಫ್ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ
ಅಣು ಒಪ್ಪಂದಕ್ಕೆ ಚೀನಾ ತಕರಾರು
ಶೀಘ್ರವೇ ಪಾಕ್ ಸರ್ಕಾರ ಪತನ: ಷರೀಫ್
ಹೈಟಿ - ಗುಸ್ತಾವ್ ದಾಳಿಗೆ 77 ಬಲಿ
ಬ್ಯಾಂಕಾಕ್: ತುರ್ತು ಪರಿಸ್ಥಿತಿ ಘೋಷಣೆ
ಜಪಾನ್ ಪ್ರಧಾನಿ ರಾಜೀನಾಮೆ