ರಾಜಕೀಯ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನ ಆಡಳಿತರೂಢ ಪಿಪಿಪಿ ವರಿಷ್ಠ ಅಸಿಫ್ ಅಲಿ ಜರ್ದಾರಿಯವರು ನಾಳೆ (ಸೆ.6) ನಡೆಯಲಿರುವ ಅಧ್ಯಕ್ಷ ಚುನಾವಣೆಗೆ ಎಲ್ಲಾ ರೀತಿಯಿಂದಲೂ ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಮತ್ತು ಆರ್ಥಿಕ ದುಸ್ಥಿತಿಯ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
53ರ ಹರೆಯದ ಮಿ.10 ಪೆರ್ಸೆಂಟ್ ಎಂದೇ ಕುಖ್ಯಾತಿ ಗಳಿಸಿರುವ ಜರ್ದಾರಿ, ಪತ್ನಿ,ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಹತ್ಯೆಯ ಬಳಿಕ ಪಿಪಿಪಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಅಧ್ಯಕ್ಷ ಚುನಾವಣೆಯಲ್ಲಿ ಜರ್ದಾರಿ ಅವರು ಎರಡು ಸದನಗಳ 700ಸದಸ್ಯ ಬಲದಲ್ಲಿ ಶೇ.60ರಷ್ಟು ಮತ ಪಡೆಯುವ ನಿರೀಕ್ಷೆ ಹೊಂದಿರುವುದಾಗಿ ಪಿಪಿಪಿ ಮೂಲಗಳು ಹೇಳಿವೆ.
ಆಗೋಸ್ಟ್ 18ರಂದು ಪರ್ವೇಜ್ ಮುಷರಫ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಪಾಕ್ ಚುನಾವಣಾ ಆಯೋಗ ಸೆ.6ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ಘೋಷಿಸಿತ್ತು.
ಏತನ್ಮಧ್ಯೆ ಪಿಪಿಪಿಯಿಂದ ಜರ್ದಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ತಾನು ಬೆಂಬಲಿಸುವುದಿಲ್ಲ ಎಂದು ಪಿಎಂಎನ್‌ಎಲ್‍ನ ನವಾಜ್ ಷರೀಫ್ ಘೋಷಿಸುವ ಮೂಲಕ, ಷರೀಫ್ ಕೂಡ ತಮ್ಮ ಪಕ್ಷದ ವತಿಯಿಂದ ಅಧ್ಯಕ್ಷ ಚುನಾವಣೆಗೆ ಮಾಜಿ ನ್ಯಾಯಾಧೀಶರೊಬ್ಬರನ್ನು ಕಣಕ್ಕಿಳಿಸಿದೆ.
|