ಭಯೋತ್ಪಾದನಾ ನಿಗ್ರಹಕ್ಕಾಗಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ಧನಸಹಾಯವನ್ನು ಭಾರತ ವಿರುದ್ಧದ ಚಟುವಟಿಕೆಗೆ ಬಳಸುತ್ತಿರುವುದಾಗಿ ಅಧ್ಯಕ್ಷ ಸ್ಥಾನಾಕಾಂಕ್ಷಿ ಡೆಮೊಕ್ರಟಿಕ್ ಪಕ್ಷದ ಬರಾಕ್ ಒಬಾಮಾ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಅಧ್ಯಕ್ಷ ಪದವಿಯ ಅಭ್ಯರ್ಥಿಯಾಗಿರುವ ಬರಾಕ್ ಒಬಾಮಾ ಅವರು ಫೋಕ್ಸ್ ನ್ಯೂಸ್ ಬಿಲ್ ಓ ರೈಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಾಕ್ ವಿರುದ್ಧ ಟೀಕಾಪ್ರಹಾರ ನಡೆಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಅಮೆರಿಕದ ಬುಷ್ ಆಡಳಿತದ ಸರ್ಕಾರ ಪಾಕಿಸ್ತಾನಕ್ಕೆ ಬಿಲಿಯನ್‌ಗಟ್ಟಲೆ ಆರ್ಥಿಕ ಸಹಾಯ ನೀಡಿದೆ. ಇದನ್ನು ಉಪಯೋಗಿಸಬೇಕಾಗಿರುವುದು ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ನಿರ್ಮೂಲನೆಗಾಗಿ, ಆದರೆ ದುರಂತವೆಂದರೆ ಇಸ್ಲಾಮಾಬಾದ್‌ನ ಮಿಲಿಟರಿ ಆಡಳಿತ ಭಾರತ ವಿರುದ್ಧದ ಚಟುವಟಿಕೆಗೆ ಬಳಸುತ್ತಿರುವುದಾಗಿ ಅವರು ದೂರಿದರು.
ಅಲ್ಲದೇ ಪಾಕಿಸ್ತಾನದಲ್ಲಿ ಮಿತಿಮೀರಿ ಅಟ್ಟಹಾಸಗೈಯುತ್ತಿರುವ ಮೂಲಭೂತವಾದದ ಕುರಿತಾಗಿಯೂ ಟೀಕಾಪ್ರಹಾರ ನಡೆಸಿರುವ ಒಬಾಮಾ,ಈ ಸ್ಥಿತಿ ಪಾಕಿಸ್ತಾನದ ಒಂದು ಭಾಗವಾಗಿ ಮುಂದುವರಿಯುತ್ತಿದೆ ಎಂದರು.
ತಾನು ವಿದ್ಯಾರ್ಥಿಯಾಗಿದ್ದಾಗ ಜಿಯಾ ಉಲ್ ಹಕ್ ಅವರ ಆಡಳಿತಾವಧಿಯಲ್ಲಿ ಭೇಟಿ ನೀಡಿರುವುದಾಗಿ ಈ ಸಂದರ್ಭದಲ್ಲಿ ನೆನಪಿಸಿಕೊಂಡ ಅವರು, ಆ ನಿಟ್ಟಿನಲ್ಲಿ ಪಾಕ್ ಭೇಟಿ ನೀಡಲು ಸಹಕರಿಸಿದ ಅಮೆರಿಕದಲ್ಲಿದ್ದ ಪಾಕ್ ಕ್ಲಾಸ್‌ಮೇಟ್‌ಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
|