ವಾಣಿಜ್ಯನಗರಿ ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನ ಇಬ್ಬರು ಸಹಚರರನ್ನು ನೇಪಾಳದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಪ್ರಕಣರಣದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದ ಇಬ್ಬರು ಭಾರತೀಯ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ತಿಳಿಸಿರುವ ನೇಪಾಳ ಪೊಲೀಸರು ಅವರನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಹೇಳಿದ್ದಾರೆ.
ಬಂಧಿತರನ್ನು ಸಲೀಂ ಅಬ್ದುಲ್ ಗನಿ ಆಲಿಯಾಸ್ ಅಶ್ಪಾಕ್ ಅಹ್ಮದ್ ಶಾ ಹಾಗೂ ರಿಯಾಜ್ ಖಾತ್ರಿ ಆಲಿಯಾಸ್ ರಿಯಾಜ್ ಅಬೂಕರ್ ಲೋನೆ ಎಂದು ಗುರುತಿಸಲಾಗಿದ್ದು, 1997ರಲ್ಲಿ ಇವರ ಬಂಧನಕ್ಕೆ ಇಂಟರ್‌ಫೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.
ಕಾಠ್ಮಂಡುವಿನಲ್ಲಿ ಅಡಗಿ ಕುಳಿತಿದ್ದ ಶಂಕಿತರ ಕುರಿತು ಮಾಹಿತಿ ಪಡೆದಿದ್ದ ಇಲ್ಲಿನ ಮೆಟ್ರೋಪೊಲಿಟನ್ ಪೊಲೀಸರು ಗುರುವಾರದಂದು ಕಾರ್ಯಾಚರಣೆ ನಡೆಸುವ ಮೂಲಕ ಬಂಧಿಸಿರುವುದಾಗಿ ವಿವರಿಸಿದ್ದಾರೆ.
ಇದು ತುಂಬಾ ಸೂಕ್ಷ್ಮ ವಿಷಯವಾಗಿದ್ದು, ಬಂಧಿತ ಇಬ್ಬರಿಗೂ ಬಿಗಿ ಭದ್ರತೆ ನೀಡಲಾಗಿತ್ತು. ಇವರನ್ನು ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದು, ಇಬ್ಬರನ್ನೂ ಭಾರತದ ಸಿಬಿಐ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅಲ್ಲದೇ ಅವರನ್ನು ಭಾರತದ ಅಧಿಕಾರಿಗಳು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಭಾರತಕ್ಕೆ ಕರೆದೊಯ್ಯಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತರ ಮೇಲೆ ಕೊಲೆ,ಕೊಲೆ ಯತ್ನ, ಕ್ರಿಮಿನಲ್ ಸಂಚು ಸೇರಿದಂತೆ ಭಯೋತ್ಪದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳು ದಾಖಲಾಗಿರುವುದಾಗಿ ನೇಪಾಳ ಪೊಲೀಸರು ತಿಳಿಸಿದ್ದಾರೆ.
|