ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಕೊನೆಗೂ ಶನಿವಾರ ಮಧ್ನಾಹ್ನ ನಡೆದ ನಿರ್ಣಾಯಕ ಸಭೆಯಲ್ಲಿ ಎನ್‌ಎಸ್‌ಜಿ ಗ್ರೂಪ್ ಗ್ರೀನ್ ಸಿಗ್ನಲ್ ನೀಡುವ ಮೂಲಕ ಭಾರತದ 34 ವರ್ಷಗಳ ಹೋರಾಟಕ್ಕೆ ಜಯ ದೊರೆದಂತಾಗಿದೆ.
ಅಣು ಒಪ್ಪಂದಕ್ಕೆ ಮುಂದುವರಿಯಲು 45 ದೇಶಗಳ ಒಮ್ಮತಾಭಿಪ್ರಾಯಕ್ಕಾಗಿ ವಿಯೆನ್ನಾದಲ್ಲಿ ಗುರುವಾರ ಆರಂಭಗೊಂಡ ಪರಮಾಣು ಸಾಮಾಗ್ರಿ ಪೂರೈಕೆದಾರರ ಗುಂಪಿನ(ಎನ್ಎಸ್‌ಜಿ) ಮೂರು ದಿನಗಳ ಸಭೆ ಇಂದು ಅಂತಿಮಗೊಂಡಂತಾಗಿದೆ.
ಅಲ್ಲದೇ ಎನ್‌ಎಸ್‌ಜಿ ಕರಡಿನಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂದು ಮಧ್ನಾಹ್ನ ನಡೆದ ಸಭೆಯಲ್ಲಿ, ಅಣುಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನ ವ್ಯಾಪ್ತಿಯೊಳಗೆ ನೀಡಿರುವ ಹೇಳಿಕೆ ತನಗೆ ತೃಪ್ತಿ ನೀಡಿದೆ ಎಂದು ಆಸ್ಟ್ರಿಯಾ ಹೇಳುವ ಮೂಲಕ ಬಿಕ್ಕಟ್ಟಿಗೆ ತೆರೆ ಬಿದ್ದಿದ್ದು, ಭಾರತ-ಅಮೆರಿಕ ಅಣು ಒಪ್ಪಂದದ ಹಾದಿ ಸುಗಮವಾದಂತಾಗಿದೆ.
ಇದೀಗ ಕೊನೆಯ ಹಂತವಾಗಿ, ಅಮೆರಿಕ ಕಾಂಗ್ರೆಸ್‌ನಲ್ಲಿ ಅಂತಿಮ ಅಂಕಿತ ಬೀಳುವುದೊಂದೇ ಬಾಕಿ ಉಳಿದಿದೆ. ಅಣು ಒಪ್ಪಂದದ ವಿಚಾರದಲ್ಲಿ ಭಾರತ ಎರಡು ಅಗ್ನಿ ಪರೀಕ್ಷೆಯಲ್ಲಿ ಜಯ ಸಾಧಿಸಿದಂತಾಗಿದೆ.
ಶುಕ್ರವಾರ ತಡರಾತ್ರಿಯವರೆಗೂ ಅಂತಿಮ ನಿರ್ಧಾರಕ್ಕೆ ಬರಲಾಗದೆ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.ಅಮೆರಿಕ ಸಿದ್ದಪಡಿಸಿರುವ, ಭಾರತಕ್ಕೆ ಅನ್ವಯಿಸುವ ವಿನಾಯ್ತಿ ದಾಖಲೆಗೆ ಸಮ್ಮತಿ ಸೂಚಿಸಲು ಆಸ್ಟ್ರಿಯಾ ತನ್ನ ಒಪ್ಪಿಗೆ ಸೂಚಿಸಿಲ್ಲದ ಪರಿಣಾಮ ಬಿಕ್ಕಟ್ಟು ಉದ್ಭವಿಸಿತ್ತು.
ತದನಂತರ ಆಸ್ಟ್ರಿಯಾ, ಚೀನಾ, ಐಯರ್ಲ್ಯಾಂಡ್, ನ್ಯೂಜಿಲ್ಯಾಂಡ್ ಅಸಮಾಧಾನ ಸೂಚಿಸುವ ಮೂಲಕ ಅಣುಬಂಧಕ್ಕೆ ಕಂಟಕ ಎದುರಾಗಿತ್ತು. ಆದರೆ ಅಣು ಒಪ್ಪಂದದ ವಿಚಾರಕ್ಕೆ ಬೆಂಬಲ ನೀಡುವಂತೆ ಅಮೆರಿಕ ನಾಲ್ಕು ದೇಶಗಳ ಮೇಲೆ ಒತ್ತಡ ಹೇರಿತ್ತು.
|