ಅಣು ಪೂರೈಕೆ ರಾಷ್ಟ್ರಗಳು ಭಾರತಕ್ಕೆ ವಿನಾಯಿತಿ ನೀಡಿದ ಬೆನ್ನಲ್ಲೇ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕೊಂಡೊಲಿಜಾ ರೈಸ್, ಭಾರತದೊಂದಿಗಿನ ಅಣು ಒಪ್ಪಂದಕ್ಕೆ ಅಂಗೀಕಾರ ನೀಡುವಂತೆ ಅಮೆರಿಕ ಕಾಂಗ್ರೆಸ್ ಅನ್ನು ಒತ್ತಾಯಿಸಿದ್ದಾರೆ.
ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಅಂಗೀಕಾರ ನೀಡುವ ಕುರಿತು ತಾನು ಆಶಾವಾದ ಹೊಂದಿರುವುದಾಗಿ ನುಡಿದ ಅವರು, ಇದು ಭಾರತ ಮತ್ತು ಅಮೆರಿಕದ ಬಾಂಧವ್ಯದಲ್ಲಿ ಅತಿ ದೊಡ್ಡ ಹೆಜ್ಜೆಯಾಗಿದೆ ಎಂದು ನುಡಿದರು. ಅವರು ಉತ್ತರ ಆಫ್ರಿಕಾದ ಪ್ರವಾಸದ ವೇಳೆ ತುನಿಸಿಯಾದಿಂದ ಅಲ್ಜೀರಿಯಾಗೆ ಪ್ರವಾಸ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ಸಮೀಪಿಸುತ್ತಿದ್ದು ಸ್ವಲ್ಪವೇ ಸಮಯ ಉಳಿದಿರುವ ಹಿನ್ನೆಲೆಯಲ್ಲಿ, ಭಾರತ-ಅಣುಒಪ್ಪಂದ ಅಂಗೀಕಾರಕ್ಕಾಗಿ ತಾನು ಕಾಂಗ್ರೆಸ್ ಸಮಿತಿ ಸದಸ್ಯರ ಜತೆಗೆ ಮಾತನಾಡುವುದಾಗಿ ಅವರು ಹೇಳಿದ್ದಾರೆ.
ಭಾರತದೊಂದಿಗಿನ ಅಣುಒಪ್ಪಂದವು ಪ್ರಜಾಸತ್ತಾತ್ಮಕ, ಆರ್ಥಿಕವಾಗಿ ಬಲಾಢ್ಯವಾಗಿರುವ ರಾಷ್ಟ್ರಕ್ಕೆ ನಿರ್ಣಾಯಕ ಇಂಧನ ಒದಗಿಸಲಿದೆ ಎಂದು ಅಣು ಒಪ್ಪಂದದ ಪರ ರಾಷ್ಟ್ರಗಳು ಹೇಳಿದರೆ, ಇದು ಅಣ್ವಸ್ತ್ರ ಪ್ರಸರಣಕ್ಕೆ ತಡೆಯೊಡ್ಡುವ ಜಾಗತಿಕ ಪ್ರಯತ್ನಕ್ಕೆ ಧಕ್ಕೆಯುಂಟಾಗುತ್ತದೆ ಮತ್ತು, ಭಾರತದ ಅಣುಶಸ್ತ್ರಾಗಾರವನ್ನು ಬಲಾಢ್ಯಗೊಳಿಸಲಿದೆ ಎಂದು ವಿರೋಧಿಗಳು ಪ್ರತಿಕ್ರಿಯಿಸಿದ್ದಾರೆ.
|