ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಮಂದಿ ಸತ್ತು 70 ಮಂದಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಶಕ್ತಿಶಾಲಿ ಸ್ಫೋಟವು ಪೇಶಾವರದ ಬಡಾಬೆರ್ ಪ್ರದೇಶದಲ್ಲಿರುವ ಪೊಲೀಸ್ ಚೌಕಿಯನ್ನು ನಾಶಮಾಡಿದೆ ಮತ್ತು ಸಮೀಪದ ಎರಡು ಮಾರುಕಟ್ಟೆಗಳಿಗೆ ಮತ್ತು ಸುಮಾರು 15 ವಾಹನಗಳಿಗೆ ತೀವ್ರ ಹಾನಿಯುಂಟುಮಾಡಿದೆ.
ಸ್ಫೋಟದಲ್ಲಿ ಸುಮಾರು 30 ಜನರು ಸತ್ತಿದ್ದಾರೆಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮೊಹಮದ್ ಸುಲೇಮಾನ್ ತಿಳಿಸಿದರು. ಸತ್ತವರಲ್ಲಿ 6 ಮಂದಿ ಪೊಲೀಸರು ಮತ್ತು 13 ವರ್ಷವಯಸ್ಸಿನ ಬಾಲಕ ಕೂಡ ಸೇರಿದ್ದಾರೆ.ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಂತೀಯ ಶಾಸಕರು ಮತ್ತು ಸಂಸತ್ ಸದಸ್ಯರ ಮತದಾನದಲ್ಲಿ ಪಿಪಿಪಿ ಮುಖ್ಯಸ್ಥ ಅಸೀಫ್ ಅಲಿ ಜರ್ದಾರಿ ಭರ್ಜರಿ ಗೆಲುವು ಗಳಿಸಿದ್ದರಿಂದ ಈ ದಾಳಿಯನ್ನು ನಡೆಸಿದ್ದಾಗಿ ಸ್ಥಳೀಯ ತಾಲಿಬಾನ್ ಹೇಳಿಕೊಂಡಿದೆ.
ಪೊಲೀಸ್ ಚೌಕಿಯ ತಡೆಗೋಡೆಯನ್ನು ಮುರಿದು ಶಸ್ತ್ರಸಜ್ಜಿತ ಸಿಬ್ಬಂದಿ ವಾಹವವೊಂದಕ್ಕೆ ಆತ್ಮಾಹುತಿ ಬಾಂಬರ್ ತನ್ನ ಕಾರನ್ನು ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟದಿಂದಾಗಿ ದೇಹಗಳು 50 ಮೀಟರ್ ದೂರದವರೆಗೆ ಚದುರಿ ಬಿದ್ದಿದ್ದವು.
|