ಭಾರತ ಮತ್ತು ಅಮೆರಿಕ ಅಣು ಒಪ್ಪಂದದ ರೀತಿಯಲ್ಲಿಯೇ ಚೀನಾದೊಂದಿಗೆ ಪರಮಾಣು ಒಪ್ಪಂದ ನಡೆಸುವ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮುಂದಿನ ವಾರ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ.
ಪಾಕಿಸ್ತಾನದಲ್ಲಿನ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ಪರಮಾಣು ಒಪ್ಪಂದ ನಡೆಸುವ ಕುರಿತಾಗಿ ಪಾಕಿಸ್ತಾನವು ಈಗಾಗಲೇ ಚೀನಾದೊಂದಿಗೆ ಸಂಪರ್ಕದಲ್ಲಿದ್ದು, ಜರ್ದಾರಿ ಅವರ ಭೇಟಿಯ ವೇಳೆ ಮಾತುಕತೆಗಳು ಪ್ರಾರಂಭಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಪಾಕಿಸ್ತಾನದ ಅಧ್ಯಕ್ಷರಾಗಿ ಚುನಾಯಿತಗೊಂಡ ಜರ್ದಾರಿ, ಮಂಗಳವಾರ ರಾಷ್ಟಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ತನ್ನ ಮೊದಲ ವಿದೇಶಿ ಭೇಟಿ ಚೀನಾ ಆಗಿದೆ ಎಂದು ಈಗಾಗಲೇ ಘೋಷಿಸಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ನಡುವಿನ ಪ್ರಸ್ತಾಪಿತ ಅಣು ಒಪ್ಪಂದದಡಿಯಲ್ಲಿ, ಪಾಕಿಸ್ತಾನದ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ, ಚೀನಾವು ಪಾಕಿಸ್ತಾನಕ್ಕೆ ಪರಮಾಣು ಮೂಲವಸ್ತುಗಳನ್ನು ಪೂರೈಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಪಾಕಿಸ್ತಾನವು ವಿಫಲವಾಗಿದ್ದು, ನವೆಂಬರ್ 2007ರಿಂದ ದೇಶದಲ್ಲಿ ಇಂಧನ ಬೇಡಿಕೆಯ ಪ್ರಮಾಣವು ಇನ್ನಷ್ಟು ಹೆಚ್ಚಳಗೊಂಡಿದೆ.
ಪಾಕಿಸ್ತಾನ ಚೀನಾ ಅಣು ಒಪ್ಪಂದವು ಅಂತಿಮ ರೂಪು ಪಡೆಯಲು ಅನೇಕ ಸಮಯ ಹಿಡಿದರೂ, ಜರ್ದಾರಿ ಅವರ ಚೀನಾ ಭೇಟಿಯ ಸಂದರ್ಭದಲ್ಲಿ ಪ್ರಾಥಮಿಕ ಮಾತುಕತೆಗಳು ಪ್ರಾರಂಭಗೊಳ್ಳಲಿದೆ ಮಾತ್ರವಲ್ಲದೆ, ಒಪ್ಪಂದದ ಕುರಿತಾಗಿ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುವ ಸಾಧ್ಯತೆಗಳೂ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
|