ಅಫ್ಘಾನಿಸ್ತಾನದಲ್ಲಿನ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಹೊಂದಿಸಲು ಮಾದಕ ವಸ್ತು ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತಾಲಿಬಾನ್ ಉಗ್ರರು, ಈಗ ಅಪರಹರಣ ಕೃತ್ಯವನ್ನು ಮತ್ತೊಂದು ಲಾಭದಾಯಕ ಹಣಕಾಸು ಮೂಲವನ್ನಾಗಿ ಕಂಡುಕೊಂಡಿದ್ದಾರೆ.
ಈ ಮೊದಲು, ಇಂತಹ ಕೃತ್ಯಗಳು ಅಪರೂಪವಾಗಿತ್ತು ಮತ್ತು ತಾಲಿಬಾನ್‌ಗಳು ಕೇವಲ ಸರಕಾರಿ ಅಧಿಕಾರಿಗಳತ್ತ ಕಣ್ಣಿಟ್ಟಿದ್ದರು. ಆದರೆ, ಸುದ್ದಿಮಾಧ್ಯಮವೊಂದು ಹೇಳುವಂತೆ, ಕಳೆದ ಕೆಲವು ವರ್ಷಗಳಲ್ಲಿ ವಿದೇಶಿಯರನ್ನು ಮತ್ತು ಅಫ್ಘಾನ್ ಉದ್ಯಮಿಗಳನ್ನು ಕೊಲೆ ಮಾಡದೆ ಅಪಹರಣ ಮಾಡುವುದು ಅತ್ಯಂತ ಲಾಭದಾಯಕವೆಂದು ತಾಲಿಬಾನ್‌ಗಳು ಕಂಡುಕೊಂಡಿರುವ ಹಿನ್ನೆಲೆಯಲ್ಲಿ, ಇದು ತಾಲಿಬಾನ್ ಉಗ್ರರ ಲಾಭದಾಯಕ ಹಣಕಾಸು ಉದ್ಯಮವಾಗಿ ರೂಪುಗೊಂಡಿದೆ.
ಮಾದಕದ್ರವ್ಯ ವ್ಯಾಪಾರದಿಂದ ವಾರ್ಷಿಕವಾಗಿ ನಾಲ್ಕು ಶತಕೋಟಿ ಡಾಲರ್ ಆದಾಯ ಗಳಿಸುವ ಗೆರಿಲ್ಲಾಗಳು ಅಪಹರಣ ಕೃತ್ಯವನ್ನು ಎರಡನೇ ಮುಖ್ಯ ಆದಾಯ ಮೂಲವಾಗಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಪ್ರಮುಖ ವ್ಯಕ್ತಿಗಳ ಅಪಹರಣದಿಂದ ದೊರೆತ ಒತ್ತೆಹಣ ಸೇರಿದಂತೆ, ತಾಲಿಬಾನ್‌ಗಳ ಆದಾಯವು ಹತ್ತು ಶತಕೋಟಿ ಡಾಲರ್ ಆಗಿದೆ ಎಂದು ಪತ್ರಿಕೆಯೊಂದು ಅಂದಾಜಿಸಿದ್ದು, ಇದರ ಪ್ರಮಾಣವು ಇನ್ನಷ್ಟು ಹೆಚ್ಚಿರಲೂಬಹುದು ಎಂದು ಹೇಳಿದೆ.
ಹೆಚ್ಚಿನ ಅಪಹರಣ ಮತ್ತು ಒತ್ತೆಹಣ ಪಾವತಿಯು ಬಹಿರಂಗಗೊಳ್ಳುವುದಿಲ್ಲ. ಈ ಮೊದಲು ಸಂಪೂರ್ಣ ಸೋತುಹೋಗಿದ್ದ ತಾಲಿಬಾನ್ ಸಮೂಹವು ಈಗ ತಮ್ಮ ನೆಲೆಯನ್ನು ಭದ್ರವಾಗಿರಿಸಿದ್ದು, ಅಪಹರಣದ ಭೀತಿಯು ಜನರಲ್ಲಿ ವಿದೇಶಿ ಪ್ರಯಾಣದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ ಎಂದು ಪತ್ರಿಕೆಗಳು ಹೇಳಿವೆ.
"ಪ್ರಾರಂಭದಲ್ಲಿ ಅಪಹರಣ ಮಾತುಕತೆಗಳು ತಾಲಿಬಾನ್ ಉಗ್ರರ ಬಿಡುಗಡೆಯೊಂದಿಗೆ ಪ್ರಾರಂಭಗೊಂಡರೂ, ನಂತರ ಇದು ಹಣದ ರೂಪದಲ್ಲಿ ಅಂತ್ಯಗೊಳ್ಳುತ್ತದೆ. ತಾಲಿಬಾನಿಗಳು ಈ ಹಣವನ್ನು ಜೈಲಿನ ಭದ್ರತಾ ಸಿಬ್ಬಂದಿಗಳಿಗೆ ಲಂಚ ನೀಡಲು ಬಳಸಿಕೊಳ್ಳುತ್ತಾರೆ. ಈ ಮೂಲಕ ಖೈದಿಗಳನ್ನು ಬಿಡುಗಡೆಗೊಳಿಸುತ್ತಾರೆ. ಇದೇ ಜೂನ್ ತಿಂಗಳಲ್ಲಿ ಇಂತಹುದೇ ಒಂದು ಪ್ರಕರಣದಲ್ಲಿ 350 ತಾಲಿಬಾನ್ ಖೈದಿಗಳು ಪರಾರಿಯಾಗಿದ್ದರು" ಎಂದು ವರದಿ ಹೇಳಿದೆ.
ಅಪಹರಣ ಕೃತ್ಯವು ಲಾಭದಾಯಕವೆಂದು ತಾಲಿಬಾನ್‌ಗಳು ಕಂಡುಕೊಂಡ ನಂತರ, ಯಾವುದೇ ಅಪಹರಣ ನಡೆದರೂ ಅದನ್ನು ತಾಲಿಬಾನ್‌ನ ಪರಮೋಚ್ಚ ಮಂಡಳಿ 'ಶುರಾ'ಗೆ ತಿಳಿಸಬೇಕು ಮತ್ತು ಮುಲ್ಲಾ ಬ್ರದರ್ ನಿಯೋಜಿಸಿದ ಪ್ರತಿನಿಧಿಗಳ ಹೊರತಾಗಿ ಒತ್ತೆಯಾಳುಗಳ ಬಿಡುಗಡೆ ಅಥವಾ ಒತ್ತೆಹಣದ ಕುರಿತು ಮಾತುಕತೆ ನಡೆಸುವಂತಿಲ್ಲ ಮತ್ತು ಇದರ ಮೂರನೇ ಎರಡು ಅಂಶದಷ್ಟು ಹಣವನ್ನು ಕೇಂದ್ರ 'ಶುರಾ' ಗೆ ನೀಡಬೇಕು ಎಂಬುದಾಗಿ ತಾಲಿಬಾನ್‌ನ ಎರಡನೇ ಪ್ರಭಾವಿ ನಾಯಕ ಮುಲ್ಲಾ ಬ್ರದರ್ ಕಾನೂನು ಹೊರಡಿಸಿದ್ದ ಎಂದೂ ಹೇಳಲಾಗಿದೆ.
|