ಅಫಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಿಯಂತ್ರಿಸಲು ಮತ್ತಷ್ಟು ಅಮೆರಿಕ ಪಡೆಗಳನ್ನು ಅಫಘಾನಿಸ್ತಾಕ್ಕೆ ಕಳುಹಿಸುವಂತೆ ಒತ್ತಡವನ್ನು ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಸೆಪ್ಟೆಂಬರ್ 11ರ ಉಗ್ರರ ದಾಳಿಯ ಏಳನೇ ವರ್ಷವಾದ ಇಂದು (ಗುರುವಾರ) ಮೌನಾಚರಣೆ ಮಾಡುವ ಮೂಲಕ, ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಿದ್ದಾರೆ.
ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗಾನ್ ಮೇಲೆ 2001ರ ಸೆಪ್ಟೆಂಬರ್ 11 ರಂದು ಭಯೋತ್ಪಾದಕರು ನಡೆಸಿದ ವಿಮಾನ ದಾಳಿಯಿಂದಾಗಿ, ಮೃತರಾದ 3,000 ಮಂದಿಯ ಸ್ಮರಣಾರ್ಥ ಪ್ರತಿ ವರ್ಷ ಬುಷ್ ಮೌನಾಚರಣೆಯನ್ನು ನಡೆಸುತ್ತಿದ್ದಾರೆ.
ಪೆಂಟಗಾನ್‌ಗೆ ಬಡಿದ ಅಮೆರಿಕನ್ ಏರ್‌ಲೈನ್ಸ್ ವಿಮಾನ 77ರಲ್ಲಿದ್ದ 184 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ನಡೆಯುವ ಸಂಸ್ಮರಣಾ ಕಾರ್ಯಕ್ರಮದಲ್ಲಿ ಬುಷ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬುಷ್ ಅವರೊಂದಿಗೆ, ಲಾರಾ ಬುಷ್, ಉಪಾಧ್ಯಕ್ಷ ಡಿಕ್ ಚೀನೀ ಮತ್ತು ಅವರ ಪತ್ನಿ, ಕಾಂಗ್ರೆಸ್ ಸದಸ್ಯರು, ಸಂಸತ್ ಸದಸ್ಯರು, ಸೇನಾ ಅಧಿಕಾರಿಗಳು ಮತ್ತು ಸುಮಾರು 3,000 ಶ್ವೇತ ಭವನ ನೌಕರರು ಪಾಲ್ಗೊಳ್ಳಲಿದ್ದಾರೆ.
ಪುಷ್ಪಗುಚ್ಛ ಅರ್ಪಣೆ, ಸಂಗೀತ ಮತ್ತು ವಿಮಾನದಲ್ಲಿದ್ದ 184 ಮಂದಿಯ ಹೆಸರನ್ನು ಈ ಕಾರ್ಯಕ್ರಮದಲ್ಲಿ ಓದಿ ಹೇಳಲಾಗುತ್ತದೆ.
ಇದರೊಂದಿಗೆ, ನವೆಂಬರ್ ತಿಂಗಳಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳಾದ ಬರಾಕ್ ಒಬಾಮಾ ಮತ್ತು ಜಾನ್ ಮೆಕೈನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಇಂದಿನ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ.
|