ಪಾಕ್‌ನ ಪೂರ್ವ ಅನುಮೋದನೆಯಿಲ್ಲದೆ ಪಾಕಿಸ್ತಾನದಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕದ ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಸಿದ್ಧ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಶ್ಫಕ್ ಕಿಯಾನಿ ಹೇಳಿರುವುದರೊಂದಿಗೆ, ಅಮೆರಿಕ ಮತ್ತು ಪಾಕಿಸ್ತಾನ ಯುದ್ಧದ ಅಂಚಿನಲ್ಲಿ ಬಂದು ನಿಂತಿದೆ.
ಭಯೋತ್ಪಾದಕ ಶಕ್ತಿಗಳನ್ನು ದಮನ ಮಾಡುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿದ್ದರೂ, ಪಾಕಿಸ್ತಾನವು ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ವಿಫಲಗೊಂಡ ಹಿನ್ನೆಲೆಯಲ್ಲಿ, ತನ್ನ ಏಳು ವರ್ಷಗಳ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಬುಷ್ ಆಡಳಿತವು ಈಗ ಅಫ್ಘಾನ್ - ಪಾಕಿಸ್ತಾನದತ್ತ ಕೇಂದ್ರೀಕರಿಸಿದೆ.
ತಾಲಿಬಾನ್ ಮತ್ತು ಅಲ್‌ಖೈದಾ ಉಗ್ರರ ವಿರುದ್ಧ ಏಳು ವರ್ಷಗಳಲ್ಲಿ ಪಾಕಿಸ್ತಾನದೊಂದಿಗೆ ಜೊತೆಯಾಗಿ ಹೋರಾಟ ನಡೆಸುತ್ತಿದ್ದ ಅಮೆರಿಕಕ್ಕೆ ಇದು ಹೊಸ ಉತ್ತೇಜನವನ್ನು ನೀಡಿದೆ.
ಪಾಕಿಸ್ತಾನ ಬುಡಕಟ್ಟು ಪ್ರದೇಶದಲ್ಲಿನ ಪರಿಸ್ಥಿತಿಯು ಸಹಿಸದಂತಾಗಿದೆ. ಇದರ ಬಗ್ಗೆ ಇನ್ನಷ್ಟು ಖಚಿತವಾಗಬೇಕಾಗಿದೆ. ಈ ಕುರಿತಾಗಿ ಆದೇಶವನ್ನು ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಭಯೋತ್ಪಾದನೆ ನಿಗ್ರಹದಲ್ಲಿನ ಪಾಕಿಸ್ತಾನದ ಇಚ್ಛಾಶಕ್ತಿ ಮತ್ತು ಸಾಮರ್ಥ್ಯದ ಕೊರತೆಯಿಂದಾಗಿ, ಪಾಕಿಸ್ತಾನವು ಅಲ್‌ಖೈದಾ ಮತ್ತು ತಾಲಿಬಾನ್ ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಬಗೆಗಿನ ಅಮೆರಿಕದ ಆತಂಕವನ್ನು ಈ ಆದೇಶವು ಪ್ರತಿಬಿಂಬಿಸುತ್ತದೆ ಎಂಬುದಾಗಿ ಪತ್ರಿಕೆಗಳು ತಿಳಿಸಿವೆ.
ಕಾರ್ಯಾಚರಣೆಯ ಕುರಿತಾಗಿ ಮೊದಲೇ ಪಾಕಿಸ್ತಾನಕ್ಕೆ ವಿವರಿಸಿದ್ದಾಗ ಅಮೆರಿಕ ಕಾರ್ಯಾಚರಣೆಗೆ ಪಾಕಿಸ್ತಾನವು ಅಡ್ಡಿ ಮಾಡಿತ್ತು. ಇದು, ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ಅಪನಂಬಿಕೆಯನ್ನು ಉಂಟುಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಬುಧವಾರ, ಅಫ್ಘಾನ್ ಗಡಿ ಪ್ರದೇಶದಲ್ಲಿರುವ ಪಾಕಿಸ್ತಾನದ ಗ್ರಾಮವೊಂದರಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯ ಮಾದರಿಯಲ್ಲಿಯೇ ದಾಳಿ ನಡೆಸಲಾಗುವುದು ಎಂಬುದಾಗಿ ಪಾಕಿಸ್ತಾನಕ್ಕೆ ಸುಳಿವು ನೀಡುವುದಾಗಿ ಅಮೆರಿಕ ಅಧಿಕಾರಿಗಳು ತಿಳಿಸಿದ್ದು, ಏನೇ ಆದರೂ, ಅಮೆರಿಕದ ಅನುಮತಿಗಾಗಿ ಕಾಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಏತನ್ಮಧ್ಯೆ, ಇಸ್ಲಾಮಾಬಾದ್ ಪೂರ್ವ ಅನುಮತಿಯಿಲ್ಲದೆ ಪಾಕಿಸ್ತಾನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಅನುಮತಿ ನೀಡುವ ಆದೇಶಕ್ಕೆ ಜುಲೈ ತಿಂಗಳಲ್ಲೇ ಬುಷ್ ಅವರು ರಹಸ್ಯ ಅನುಮತಿ ನೀಡಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಇಂದು ವರದಿ ಮಾಡಿದೆ.
ಅಫಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿ ಭಾಗದ ಎರಡೂ ಪ್ರದೇಶಗಳಲ್ಲಿ ಸಮಗ್ರ ಕಾರ್ಯತಂತ್ರ ರೂಪಿಸಲು ಪ್ರಯತ್ನಿಸುವುದಾಗಿ ಹೇಳಿರುವ ಅಮೆರಿಕ ಜಂಟಿ ಸೇನಾ ಸಿಬ್ಬಂದಿ ಮುಖ್ಯಸ್ಥ ಎಡ್ಮಿರಲ್ ಮೈಕ್ ಮುಲನ್, ಈ ಆದೇಶವನ್ನು ಬಹಿರಂಗವಾಗಿ ದೃಢಪಡಿಸಿದ್ದಾರೆ.
ಪಾಕ್ ಟೀಕೆ ಈ ನಡುವೆ, ಪಾಕಿಸ್ತಾನದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸಿರುವ ಪಾಕ್ ಪ್ರಧಾನ ಸೇನಾ ಮುಖ್ಯಸ್ಥ ಅಶ್ಫಕ್ ಕಯಾನಿ, ಪಾಕಿಸ್ತಾನ ಸಾರ್ವಭೌಮತೆಯನ್ನು ಪಾಕಿಸ್ತಾನವು ರಕ್ಷಿಸಿಕೊಳ್ಳುತ್ತದೆ ಎಂದು ಗುಡುಗಿದ್ದಾರೆ.
ಯಾವುದೇ ಬೆಲೆ ತೆತ್ತಾದರೂ ದೇಶದ ಸಾರ್ವಭೌಮತೆ ಮತ್ತು ಪ್ರದೇಶವನ್ನು ರಕ್ಷಿಸಿಕೊಳ್ಳುವುದಾಗಿ ಹೇಳಿರುವ ಕಯಾನಿ, ಪಾಕಿಸ್ತಾನದಲ್ಲಿ ಕಾರ್ಯಾಚರಣೆಯನ್ನು ನಡೆಸಲು ಬಾಹ್ಯ ಶಕ್ತಿಗಳಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|