ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ಬಾಂಗ್ಲಾದೇಶದ ಸೇನಾ ಬೆಂಬಲಿತ ಮಧ್ಯಂತರ ಸರಕಾರದ ನಡುವಿನ ಒಪ್ಪಂದದಂತೆ, ವರ್ಷಗಳ ಬಂಧನದ ನಂತರ ಖಲೀದಾ ಜಿಯಾ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.
ಬಿಡುಗಡೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಜೈಲು ಅಧಿಕಾರಿಗಳಿಗೆ ತಲುಪಿದ ಬಳಿಕ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಮುಖ್ಯಸ್ಥೆಯಾಗಿರುವ ಜಿಯಾ ಬಿಡುಗಡೆ ಹೊಂದಿದರು. ಬಿಡುಗಡೆಗೊಂಡ ಜಿಯಾ ಅವರು ಮೊದಲ ತನ್ನ ಪತಿ, ಮಾಜಿ ಪ್ರಧಾನಿ ಜಿಯೌರ್ ರೆಹ್ಮಾನ್ ಅವರ ಸಮಾಧಿಗೆ ತೆರಳಿದರು.
ಜಿಯಾ ಅವರ ಬಿಡುಗಡೆಯ ಸುದ್ದಿ ತಿಳಿಯುತ್ತಿದ್ದಂತೆಯೇ, ಪಕ್ಷದ ಹಿರಿಯ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರು ಜಿಯಾ ಪರ ಘೋಷಣೆಗಳನ್ನು ಕೂಗಿದರು. ಇನ್ನು ಕೆಲವರು ಪಾರಿವಾಳವನ್ನು ಮತ್ತು ಬಲೂನನ್ನು ಹಾರಿಸಿ ಸಂಭ್ರಮವನ್ನಾಚರಿಸಿದರು.
ಜಿಯಾ ಅವರ ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಹೈಕೋರ್ಟ್ ಮೂರು ತಿಂಗಳ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ, ಜಿಯಾ ಅವರ ಮೇಲಿದ್ದ ಕಾನೂನು ಪ್ರತಿಬಂಧಗಳೆಲ್ಲ ವಿಮುಕ್ತಿಗೊಂಡಂತಾಗಿದೆ.
|