123 ಒಪ್ಪಂದವೆಂದು ಕರೆಯಲ್ಪಡುವ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕರಡನ್ನು ಅನುಮೋದನೆಗಾಗಿ ಅಮೆರಿಕ ಕಾಂಗ್ರೆಸ್‌ಗೆ ಕಳುಹಿಸಿರುವುದರೊಂದಿಗೆ, ಭಾರತಕ್ಕೆ ಅಣು ಇಂಧನ ಪೂರೈಸುವ ಭರವಸೆಗಳು ಅಮೆರಿಕದ ಕಾನೂನು ಬದ್ಧತೆಯನ್ನು ಹೊಂದಿಲ್ಲ ಎಂದು ಅಮೆರಿಕ ಕಾಂಗ್ರೆಸ್‌ಗೆ ಕಳುಹಿಸಿರುವ ಪತ್ರದಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಉಲ್ಲೇಖಿಸುವುದರೊಂದಿಗೆ, ಅಣುಬಂಧ ಭಾರತದಲ್ಲಿ ಇನ್ನಷ್ಟು ವಿವಾದ ಉಂಟುಮಾಡಿದೆ.
'ಪರಿಚ್ಛೇದ 5(6)ರಲ್ಲಿ ಒಪ್ಪಂದವು, ಭಾರತಕ್ಕೆ ಪೂರೈಸುವ ಅಣು ಇಂಧನವು ಕೆಲವು ರಾಜಕೀಯ ಬದ್ಧತೆಗಳನ್ನು ಹೊಂದಿದೆ. ಏನೇ ಆದರೂ, ಅಣು ಒಪ್ಪಂದವು ಅಮೆರಿಕದೊಂದಿಗಿನ ಇತರ ಒಪ್ಪಂದಗಳಂತೆ ಚೌಕಟ್ಟಿನ ಒಪ್ಪಂದವಾಗಿರುವುದರಿಂದ, ಈ ರಾಜಕೀಯ ಬದ್ಧತೆಯನ್ನು ಕಾನೂನು ಬದ್ಧತೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ' ಎಂಬುದಾಗಿ ಬುಷ್ ಅಮೆರಿಕ ಕಾಂಗ್ರೆಸ್‌ಗೆ ಕಳುಹಿಸಿರುವ ಪತ್ರದಲ್ಲಿ ಹೇಳಲಾಗಿದೆ.
ಭಾರತವು ಅಣು ಪರೀಕ್ಷೆಯನ್ನು ನಡೆಸಿದಲ್ಲಿ ಭಾರತಕ್ಕೆ ಅಣು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂಬ ವಿದೇಶಾಂಗ ವಿಭಾಗದ ರಹಸ್ಯ ಪತ್ರದ ವರದಿಗಳಿಂದ ಭಾರತೀಯ ಅಧಿಕಾರಿಗಳು ಈಗಾಗಲೇ ಅಸಮಧಾನಗೊಂಡಿದ್ದಾರೆ.
ಈ ವರದಿಗಳು ಒಪ್ಪಂದದ ಮೂಲ ಪರಿಶೀಲನೆಗೆ ಒತ್ತಾಯಿಸುವಂತೆ ಮಾಡುತ್ತದೆ ಮತ್ತು ಈ ವಿಚಾರದ ಕುರಿತಾಗಿ ವಾಷಿಂಗ್ಟನ್‌ನೊಂದಿಗೆ ಮಾತುಕತೆ ನಡೆಸುವುದಾಗಿ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ದಕ್ಷಿಣ ಮತ್ತು ಕೇಂದ್ರ ಏಶಿಯಾದ ಅಮೆರಿಕ ಉಪ ವಿದೇಶಾಂಗ ಕಾರ್ಯದರ್ಶಿ ರಿಚರ್ಡ್ ಬೌಚರ್, 123 ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್‌ನಿಂದ ಸುಲಭ ಅನುಮೋದನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಏನೇ ಆದರೂ, ಹೈಡ್ ಕಾನೂನು ಕುರಿತಾಗಿ ಅಮೆರಿಕ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡಿಬಂದಿರುವ ಹಿನ್ನೆಲೆಯಲ್ಲಿ, ಅಮೆರಿಕ ಕಾಂಗ್ರೆಸ್‌ನ ಸುಲಭ ಅನುಮೋದನೆಯನ್ನು ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
|