ಅಲ್‌ಖೈದಾ ಮತ್ತು ತಾಲಿಬಾನ್ ಉಗ್ರಗಾಮಿಗಳ ಸುರಕ್ಷಿತ ತಾಣವಾಗಿರುವ ವಾಯುವ್ಯ ಪಾಕಿಸ್ತಾನದ ಉತ್ತರ ವಜರಿಸ್ತಾನದಲ್ಲಿ ಅಮೆರಿಕ ವೈಮಾನಿಕ ಪಡೆ ಶುಕ್ರವಾರ ಕ್ಷಿಪಣಿ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು 12 ಮಂದಿ ಬಲಿಯಾಗಿದ್ದಾರೆ.
ಅಫಘಾನಿಸ್ತಾನ ಗಡಿ ಭಾಗದಲ್ಲಿ ತಾಲಿಬಾನ್ ಮತ್ತು ಅಲ್‌ಖೈದಾ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟಿದ್ದು, ಈ ಸಂಬಂಧ ಇದು ಅಮೆರಿಕದ ಮೊದಲ ದಾಳಿಯಾಗಿದೆ.
ಇಸ್ಲಾಮಾಬಾದ್‌ನ ಅನುಮತಿ ಇಲ್ಲದೆ ಯುಎಸ್ ದಾಳಿ ನಡೆಸುತ್ತಿರುವುದಕ್ಕೆ ನಿನ್ನೆಯಷ್ಟೇ ಪಾಕ್ ಆರ್ಮಿ ಜನರಲ್ ಕಿಯಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಇಂದು ಅಮೆರಿಕ ವಿಮಾನಗಳು ಕ್ಷಿಪಣಿ ದಾಳಿ ನಡೆಸಿದ್ದು, ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಮಿರಾನ್ಶಾದಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಟೂಲ್ ಖೇಲಿ ಗ್ರಾಮದಲ್ಲಿ ಉಗ್ರಗಾಮಿಗಳು ಮತ್ತು ಅವರ ಕುಟುಂಬಗಳು ವಾಸಿಸುತ್ತಿದ್ದ ಸರಕಾರಿ ಶಾಲೆಯಲ್ಲಿ ಎರಡು ಕ್ಷಿಪಣಿ ದಾಳಿ ನಡೆಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಪಾಕಿಸ್ತಾನ ಸರಕಾರದ ಅನುಮೋದನೆಯಿಲ್ಲದೇ, ಪಾಕಿಸ್ತಾನದಲ್ಲಿ ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಬುಷ್ ಆಡಳಿತವು ಅಮೆರಿಕ ಸೇನೆಗೆ ರಹಸ್ಯ ಆದೇಶ ನೀಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಗುರುವಾರ ವರದಿ ಮಾಡಿತ್ತು.
ಪಾಕಿಸ್ತಾನದ ಅನುಮತಿಯಿಲ್ಲದೆ ಬಾಹ್ಯ ಸಂಘಟನೆಗಳು ದೇಶದಲ್ಲಿ ಕಾರ್ಯಾಚರಣೆಗೆ ಅನುವು ಮಾಡಿಕೊಡುವುದಿಲ್ಲ ಎಂಬುದಾಗಿ ಈ ವರದಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಶ್ಫಕ್ ಕಯಾನಿ ಪ್ರತಿಕ್ರಿಯಿಸಿದ್ದರು. ಅಲ್ಲದೆ, ಯಾವುದೇ ಬೆಲೆ ತೆತ್ತಾದರೂ, ದೇಶದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವುದಾಗಿ ಕಯಾನಿ ಸ್ಪಷ್ಟಪಡಿಸಿದ್ದಾರೆ.
|