ಭಾರತದೊಂದಿಗಿನ ಸಿಯಾಚಿನ್ ಮತ್ತು ಸರ್ ಕ್ರೀಕ್ ಸಂಬಂಧಿತ ವಿವಾದಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಿಶ್ವಾಸ ವ್ಯಕ್ತಪಡಿಸಿದ್ದು, ಇದು ದೀರ್ಘಾವಧಿಯ ಕಾಶ್ಮೀರ ವಿವಾದವನ್ನು ಬಗೆಹರಿಸುವಲ್ಲಿ ಪೂರಕ ವಾತಾವರಣವನ್ನು ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದೊಂದಿಗಿನ ವಿವಾದ ಪರಿಹಾರಕ್ಕೆ ಪಾಕಿಸ್ತಾನ ಸರಕಾರವು ರಹಸ್ಯ ರಾಯಭಾರಿ ತಂತ್ರವನ್ನು ಅವಲಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜರ್ದಾರಿ, ಸಿಯಾಚಿನ್ ಮತ್ತು ಸರ್ ಕ್ರೀಕ್ ಗಡಿ ಭಾಗದ ಸಮಸ್ಯೆಗಳು ಶೀಘ್ರವೇ ಬಗೆಹರಿಯುತ್ತವೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಎರಡು ವಿವಾದಗಳ ಶೀಘ್ರ ಇತ್ಯರ್ಥದಿಂದ ಎರಡು ದೇಶಗಳ ನಡುವೆ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಇದು ಕಾಶ್ಮೀರ ವಿವಾದ ಪರಿಹಾರಕ್ಕೆ ಪೂರಕ ವಾತಾವರಣವನ್ನು ಉಂಟುಮಾಡುತ್ತದೆ ಎಂದು ಜರ್ದಾರಿ ಹೇಳಿದ್ದಾರೆ.
ಮೊದಲ ಸಂಸತ್ ಸಮಿತಿಯಲ್ಲಿ ಕಾಶ್ಮೀರ ಕುರಿತಾದ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜರ್ದಾರಿ ತಿಳಿಸಿದ್ದಾರೆ. ಸರ್ ಕ್ರೀಕ್ ವಿವಾದವನ್ನು ಬಗೆಹರಿಸುವಲ್ಲಿ ಭಾರತ ಮತ್ತು ಪಾಕಿಸ್ತಾನವು ಹೆಚ್ಚಿನ ಆಸಕ್ತಿಯನ್ನು ಹೊಂದಿವೆ ಎಂದು ವರದಿಗಳು ಹೇಳಿವೆ.
|