ಟೆಕ್ಸಾಸ್ ಕರಾವಳಿ ತೀರವನ್ನು ಶನಿವಾರ ಅಪ್ಪಳಿಸಿರುವ ಐಕ್ ಚಂಡಮಾರುತ, ಮೆಕ್ಸಿಕೊ ಕೊಲ್ಲಿಯಲ್ಲಿರುವ ಪಟ್ಟಣಗಳಿಗೆ ವಿಧ್ವಂಸಕಾರಿ ಬೆದರಿಕೆ ಒಡ್ಡಿದೆ. ಅಗತ್ಯ ತೈಲ ಶುದ್ಧೀಕರಣ ಕೇಂದ್ರಗಳನ್ನು ಚಂಡಮಾರುತದ ಭೀತಿಯಿಂದ ಮುಚ್ಚಲಾಗಿದ್ದು, ಹೋಸ್ಟನ್ ನಗರವನ್ನು ಪೀಡಿಸಿರುವ ಐಕ್ ಸುಮಾರು 20 ವರ್ಷಗಳಲ್ಲೇ ಅತ್ಯಂತ ಭೀಕರವಾದ ಚಂಡಮಾರುತವೆಂದು ಹೇಳಲಾಗಿದೆ.
ಐಕ್ ಚಂಡಮಾರುತವು ಗ್ಯಾಲ್ವೆಸ್ಟಾನ್ ದ್ವೀಪ ನಗರಕ್ಕೆ ಗಂಟೆಗೆ 110 ಕಿಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಎರಡನೇ ವರ್ಗದ ಚಂಡಮಾರುತವಾಗಿ ಅಪ್ಪಳಿಸಿತು ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.
ಚಂಡಮಾರುತವು 20 ಅಡಿ ಎತ್ತರದ ಅಲೆಗಳನ್ನು ಸೃಷ್ಟಿಸಿ 17 ಅಡಿ ಎತ್ತರದ ಸಮುದ್ರಗೋಡೆಗೆ ಅಪ್ಪಳಿಸಿತು. 1900ರಲ್ಲಿ ಅಪ್ಪಳಿಸಿದ ಭೀಕರ ಚಂಡಮಾರುತದಿಂದ 8000 ಜನರು ಅಸುನೀಗಿದ ಹಿನ್ನೆಲೆಯಲ್ಲಿ ನಗರದ ರಕ್ಷಣೆ ಸಲುವಾಗಿ ಗೋಡೆಯನ್ನು ನಿರ್ಮಿಸಲಾಗಿತ್ತು.
|