ಬಾಂಗ್ಲಾದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿತ ಇಸ್ಲಾಮಿಕ್ ಸಮೂಹ ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ(ಹುಜಿ) ಸನ್ನದ್ಧಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧಕ್ಕಾಗಿ ಅಫಘಾನಿಸ್ತಾನದಲ್ಲಿ 1980ರಲ್ಲಿ ಜನ್ಮ ತಾಳಿದ ಹುಜಿ ಸಂಘಟನೆಯು, ಇದೀಗ ಜಿಹಾದ್ ಹೆಸರಿನಲ್ಲಿ, ಭ್ರಷ್ಟಾಚಾರ, ಕೋಮುವಾದದ ವಿರುದ್ಧ ಹೋರಾಡುವ ಗುರಿಯೊಂದಿಗೆ ನೂತನ ಹೆಸರಿನೊಂದಿಗೆ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿದೆ.
ಪವಿತ್ರ ಖುರಾನಿನೊಂದಿಗೆ, ಹುಜಿ ಸಂಘಟನೆಯು ರಾಜ್ಯದಲ್ಲಿ ನೈಜ ಪ್ರಜಾಪ್ರಭುತ್ವ ನಿರ್ಮಿಸುವ ಧ್ಯೇಯವನ್ನು ಹೊಂದಿದೆ ಎಂಬುದಾಗಿ ಹುಜಿಯ ಉನ್ನತ ನಾಯಕರನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಸೆಪ್ಟೆಂಬರ್ ಎಂಟರಂದು ರಾಜ್‌ಶಾಹಿಯಲ್ಲಿ ನಡೆದ ಇಫ್ತಿಕಾರ್ ಪಾರ್ಟಿಯಲ್ಲಿ ಈ ಕುರಿತು ಮಾತುಕತೆ ನಡೆಸಲಾಗಿದ್ದು, ಇಸ್ಲಾಮಿಕ್ ಡೆಮಕ್ರಟಿಕ್ ಪಾರ್ಟಿ (ಐಡಿಪಿ) ಎಂಬ ಬ್ಯಾನರ್‌ನಡಿಯಲ್ಲಿ ಅಖಾಡ ಚುನಾವಣೆಯಲ್ಲಿ ಹುಜಿ ನಾಯಕರು ಸ್ಪರ್ಧಿಸಲಿದ್ದಾರೆ. ಈ ಸಂಬಂಧ, ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಸರಕಾರದೊಂದಿಗೆ ಹುಜಿ ಮಾತುಕತೆಯಲ್ಲಿರುವುದಾಗಿ ಮೂಲಗಳು ತಿಳಿಸಿವೆ.
ಅಲ್ಲದೆ, ಮುಂದಿನ ಪ್ರಧಾನ ಚುನಾವಣೆಯಲ್ಲಿ ಸ್ಪರ್ಧಿಸಲು ಐಡಿಪಿಗೆ ಅಧಿಕೃತ ಮನ್ನಣೆಯನ್ನು ಪಡೆಯುವ ನಿಟ್ಟಿನಲ್ಲಿ, ಚುನಾವಣಾ ಆಯೋಗದೊಂದಿಗೂ ಮಾತುಕತೆ ನಡೆಸುವುದಾಗಿ ಹೇಳಿದೆ.
|