ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ, ಭಯೋತ್ಪಾದನೆ ನಿಯಂತ್ರಣಗೊಳ್ಳುವ ಬದಲು ಇನ್ನಷ್ಟು ಉಲ್ಬಣಗೊಂಡಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಭಿಪ್ರಾಯಪಟ್ಟಿದ್ದಾರೆ.
ಆ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ನೂತನ ಮಾತುಕತೆಗೆ ಕರೆ ನೀಡಿರುವ ಜರ್ದಾರಿ, ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಈ ಕುರಿತಾಗಿ ಅಂತಾರಾಷ್ಟ್ರೀಯ ಸಮಾವೇಶವನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
ಭಯೋತ್ಪಾದನೆ ನಿಗ್ರಹಕ್ಕಾಗಿ ಇಲ್ಲಿಯವರೆಗೆ ನಡೆಸಿರುವ ಪ್ರಯತ್ನಗಳು ವಿಫಲಗೊಂಡು, ಭಯೋತ್ಪಾದನೆ ಪ್ರಮಾಣವು ಹೆಚ್ಚಳಗೊಂಡಿದೆ ಎಂದು ಜರ್ದಾರಿ ಅವರನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಅಫಘಾನಿಸ್ತಾನದಲ್ಲಿನ ನ್ಯಾಟೋ ವಿಫಲತೆಗೂ ಪಾಕಿಸ್ತಾನವನ್ನೇ ದೂಷಿಸಲಾಗುತ್ತಿದೆ ಎಂದು ಜರ್ದಾರಿ ಇದೇ ವೇಳೆ ತಿಳಿಸಿದ್ದಾರೆ.
|