ಆಂಧ್ರಪ್ರದೇಶ ಮೂಲದ ವೈದ್ಯಕ್ಯೀಯ ವಿದ್ಯಾರ್ಥಿಯೊಬ್ಬರು, ಅಮೆರಿಕದ ಚಿಕಾಗೋದಲ್ಲಿ ಆಗಂತುಕನೊಬ್ಬನ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ಮುನಿಯಾಲಿನ ಸೌಮ್ಯಾ ರೆಡ್ಡಿ ಅವರನ್ನು ಚಿಕಾಗೋ ಕಾಲೇಜ್ ಕ್ಯಾಂಪಸ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಅದಿಲಾಬಾದ್ ಜಿಲ್ಲಾ ಪೊಲೀಸ್ ಮಹಾ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ಕುರಿತಾಗಿ ಭಾನುವಾರ ರಾತ್ರಿ ತಿಳಿದು ಬಂದಿದ್ದು, ಮೃತಳ ಕುಟುಂಬದ ವಿವರಗಳನ್ನು ಸಂಗ್ರಹಿಸುವಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಸೌಮ್ಯ ನಂತರ, ಎಂಎಸ್ ಡಿಗ್ರಿಗಾಗಿ ಅಮೆರಿಕಕ್ಕೆ ತೆರಳಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದ ಅಮೆರಿಕದಲ್ಲಿ ಹತ್ಯೆಯಾಗಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ರೆಡ್ಡಿ ನಾಲ್ಕನೆಯವರಾಗಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕರೀಂ ನಗರದ ಮೆಡಿಕಲ್ ವಿದ್ಯಾರ್ಥಿ ಶ್ರೀನಿವಾಸ್‌ನನ್ನು ಹತ್ಯೆ ಮಾಡಲಾಗಿತ್ತು. ನಂತರ ಡಿಸೆಂಬರ್ 2007ರಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳಾದ ಕಿರಣ್ ಕುಮಾರ್ ಮತ್ತು ಚಂದ್ರಶೇಖರ್ ರೆಡ್ಡಿ ಅವರನ್ನು ಹತ್ಯೆಗೈಯಲಾಗಿತ್ತು.
|