ಜಿಂಬಾಬ್ವೆಯ ವಿರೋಧ ಪಕ್ಷದ ನಾಯಕ ಮೋರ್ಗನ್ ಸಾವಂಗಿರಿ ಅವರು ರಾಜಕೀಯ ವೈರಿ ಜಿಂಬಾಬ್ವೆ ಅಧ್ಯಕ್ಷ ರೋಬರ್ಟ್ ಮುಗಾಬೆ ಅವರೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರೊಂದಿಗೆ ಮುಗಾಬೆ ಮೂರು ದಶಕಗಳ ಸರ್ವಾಧಿಕಾರ ಅಂತ್ಯವೆಂಬಂತೆ ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಈ ಒಪ್ಪಂದದಡಿಯಲ್ಲಿ, ಸಾವಂಗಿರಿ ಜಿಂಬಾಬ್ವೆಯ ಪ್ರಧಾನ ಮಂತ್ರಿಯಾಗಿ ಮತ್ತು ಸಂಸತ್ ವರಿಷ್ಠರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಗಾಬೆ ಅವರು ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ.
ಮಾರ್ಚ್ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂವ್‌ಮೆಂಟ್ ಆಫ್ ಡೆಮಕ್ರಟಿಕ್ ಪಕ್ಷದ ಸಾವಂಗಿರಿ ಅವರು ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಆದರೆ, ಮುಗಾಬೆ ಅವರು ಇದು ಅಕ್ರಮ ಚುನಾವಣೆ ಎಂದು ಆರೋಪಿಸುವ ಮೂಲಕ ಮರು ಚುನಾವಣೆಗೆ ಒತ್ತಡ ಹೇರಿದ್ದರು. ಬಳಿಕ ಸಾವಂಗಿರಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಮುಗಾಬೆ ಅವರ ಅಧ್ಯಕ್ಷೀಯ ಗಾದಿಗೆ ಏರಲು ಹಾದಿ ಸುಗಮ ಮಾಡಿಕೊಟ್ಟಿದ್ದರು.
ಮುಗಾಬೆ ಬೆಂಬಲಿಗರ ಒತ್ತಡದ ಮೇರೆಗೆ, ಸಾವಂಗಿರಿ ಅವರು ಅಧ್ಯಕ್ಷೀಯ ಸ್ಥಾನದಿಂದ ಹಿಂದೆ ಸರಿದ ನಂತರ, ಜಿಂಬಾಬ್ವೆಯಲ್ಲಿ ನಡೆದ ಏಕವ್ಯಕ್ತಿ ಚುನಾವಣೆಯಲ್ಲಿ ಮುಗಾಬೆ ಗೆಲುವು ಸಾಧಿಸಿದ್ದರು.
ಕಳೆದ ಹಲವು ದಿನಗಳ ಮಾತುಕತೆಯ ನಂತರ ರಾಜಕೀಯ ಶತ್ರುಗಳ ನಡುವಿನ ಉಂಟಾದ ಅಧಿಕಾರ ಹಂಚಿಕೆ ಒಪ್ಪಂದವು ಜಿಂಬಾಬ್ವೆ ಜನತೆಯಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದ್ದು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಇದು ಸಹಾಯಕವಾಗಲಿದೆ ಎಂಬ ಆಶಯವನ್ನು ಹೊಂದಿದ್ದಾರೆ.
|