ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳ ಕಾರ್ಯಾಚರಣೆಗೆ ಅಮೆರಿಕ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ಬೆಂಬಲ ಸೂಚಿಸಿದ್ದು, ಭಯೋತ್ಪಾದನೆಯ ನಿಗ್ರಹದ ಕುರಿತಾಗಿ ಬುಷ್ ಆಡಳಿತವು ಸರಿಯಾದ ಮಾರ್ಗದಲ್ಲಿದ್ದು ಆದರೆ ಇದು ಪ್ರಾರಂಭಿಕ ಹೆಜ್ಜೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಹೋರಾಟದ ಕೇಂದ್ರಬಿಂದು ಅಫಘಾನಿಸ್ತಾನ ಮತ್ತು ಪಾಕಿಸ್ತಾನವಾಗಿದ್ದು, ಅಮೆರಿಕವು ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬೇಕೆಂದು ಒಬಾಮಾ ಈ ಮೊದಲೇ ಸೂಚಿಸಿದ್ದರು ಎಂಬುದಾಗಿ ಒಬಾಮಾ ಅವರ ವಿದೇಶಿ ನೀತಿ ಸಲಹೆಗಾರ ಸುಸಾನ್ ರೈಸ್ ತಿಳಿಸಿದ್ದಾರೆ.
ಪ್ರಸಕ್ತ ಬುಷ್ ಆಡಳಿತವು ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದು, ಇಂತಹ ನೀತಿಯನ್ನು ರಾಷ್ಟ್ರವು ಜಾರಿಗೊಳಿಸಬೇಕು. ಇದು ಕೇವಲ ಬುಷ್ ಆಡಳಿತದ ಪ್ರಾರಂಭಿಕ ಹೆಜ್ಜೆಯಾಗಿದೆ. ಆದರೆ ಇದು ಸರಿಯಾದ ದಾರಿಯಲ್ಲಿಯೇ ಇದೆ ಎಂದು ಸುಸಾನ್ ಹೇಳಿದ್ದಾರೆ.
ಬರಾಕ್ ಒಬಾಮಾ ಅವರು ಯಾವ ನೀತಿಯಲ್ಲಿ ನಂಬಿಕೆಯಿಟ್ಟಿದ್ದರೋ ಬುಷ್ ಆಡಳಿತವು ಅದನ್ನೇ ಮಾಡುತ್ತಿದೆ ಎಂದ ಅವರು, ಪಾಕಿಸ್ತಾನದ ಮೇಲಿನ ಕಾರ್ಯಾಚರಣೆಯು ಪಾಕಿಸ್ತಾನ ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನವಲ್ಲ ಬದಲಾಗಿ ಸ್ವರಕ್ಷಣಾ ಕ್ರಮವಾಗಿದೆ ಎಂದಿದ್ದಾರೆ.
|