ರಾಜಕೀಯದೊಂದಿಗೆ ಸಿದ್ಧಾಂತವನ್ನು ಮಿಶ್ರಮಾಡಲು ತಾನು ಬಯಸುವುದಿಲ್ಲ ಎಂದು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಆಲಿಯಾಸ್ 'ಪ್ರಚಂಡ' ತಿಳಿಸಿದ್ದು, ತನ್ನ ಭಾರತ ಭೇಟಿಯು, ಮಾವೋವಾದಿ ತತ್ವಗಳ ಪ್ರಸಾರದ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾವೋವಾದಿ ಸಿದ್ಧಾಂತಗಳ ಪ್ರಚಾರಕ್ಕೆ ಭಾರತಕ್ಕೆ ತೆರಳಿಲ್ಲ ಎಂಬುದಾಗಿ ತನ್ನ ಐದು ದಿನಗಳ ಭಾರತ ಭೇಟಿಯಿಂದ ಹಿಂತಿರುಗಿದ ಪ್ರಚಂಡ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನನ್ನ ಭಾರತ ಭೇಟಿಯ ವೇಳೆ ಯಾವುದೇ ಮಾವೋವಾದಿ ಪಕ್ಷದ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸಲು ಭಾರತಕ್ಕೆ ಭೇಟಿ ನೀಡಿದ್ದೆ ಎಂದು ಪ್ರಚಂಡ ಹೇಳಿದ್ದಾರೆ.
ಮಾರ್ಕ್ಸಿಸ್ಟ್ ಮತ್ತು ಮಾವೋವಾದಿ ಸಿದ್ಧಾಂತಗಳಿಗೆ ಅದರದೇ ಆದ ಸ್ಥಳವಿದ್ದು, ಅದನ್ನು ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಸಂಬಂಧದೊಂದಿಗೆ ಬೆರೆಸಲು ಬಯಸುವುದಿಲ್ಲ ಎಂದು ಪ್ರಚಂಡ ತಿಳಿಸಿದ್ದಾರೆ.
|