ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದವು ಶೀಘ್ರಪಥದಲ್ಲಿ ಸಾಗಲು ಅಮೆರಿಕ ಕಾಂಗ್ರೆಸ್ ಪ್ರಯತ್ನಿಸುವುದರೊಂದಿಗೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಮುಂದಿನ ವಾರದ ಭೇಟಿಯ ಸಮಯದಲ್ಲದಿದ್ದರೂ, ಸೆಪ್ಟೆಂಬರ್ ಅಂತ್ಯದೊಳಗೆ ಒಪ್ಪಂದ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂಬುದಾಗಿ ಸೂಚನೆ ನೀಡಲಾಗಿದೆ.
ಗುರುವಾರ ನಡೆದ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯ ಒಪ್ಪಂದ ಕುರಿತಾದ ವಿಚಾರಣೆಯ ವೇಳೆ ಈ ಸೂಚನೆಯನ್ನು ನೀಡಲಾಗಿದ್ದು, ಈ ತಿಂಗಳಾಂತ್ಯದೊಳಗೆ 'ಐತಿಹಾಸಿಕ' ಒಪ್ಪಂದಕ್ಕೆ ಅನುಮೋದನೆ ನೀಡುವಂತೆ ಡೆಮಾಕ್ರಟಿಕ್ ಸೆನೆಟರ್ ಕ್ರಿಸ್ ಡಾಡ್ ಕರೆ ನೀಡಿದ್ದಾರೆ.
ಮುಂದಿನ ವರ್ಷದವರೆಗೆ ಕಾಯುವ ಬದಲು, ಈ ತಿಂಗಳಲ್ಲಿ ಒಪ್ಪಂದಕ್ಕೆ ಅನುಮೋದನೆ ನೀಡುವಂತೆ ಸಲಹೆ ನೀಡಲಾಗಿದೆ ಎಂದು ಹಿರಿಯ ಸೆನೆಟರ್ ತಿಳಿಸಿದ್ದಾರೆ.
ಭಾರತದೊಂದಿಗಿನ ಪರಮಾಣು ಒಪ್ಪಂದವು ಪೂರ್ಣ ಪ್ರಮಾಣದ್ದಲ್ಲ. ಆದರೆ, ಈ ಒಪ್ಪಂದದ ಅನುಮೋದನೆಯು ಭಾರತ ಅಮೆರಿಕ ಸಂಬಂಧದಲ್ಲಿ ಮೈಲುಗಲ್ಲನ್ನು ಸ್ಥಾಪಿಸಲಿದೆ ಎಂದು ಡಾಡ್ ಹೇಳಿದ್ದಾರೆ.
ಗುರುವಾರ ನಡೆದ ಒಪ್ಪಂದದ ಕುರಿತಾದ ವಿಚಾರಣೆಯ ವೇಳೆ ನೀಡಿರುವ ಗ್ರೀನ್ ಸಿಗ್ನಲ್ ಮತ್ತು ಡಾಡ್ ಅವರ ಈ ಹೇಳಿಕೆಯು, ನವೆಂಬರ್ ನಾಲ್ಕರ ಅಧ್ಯಕ್ಷೀಯ ಚುನಾವಣೆಯ ಮುಂದಾಗಿ, ಸೆಪ್ಟೆಂಬರ್ 26ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸುವ ಬುಷ್ ಆಡಳಿತದ ಪ್ರಯತ್ನ ಫಲಕಾರಿಯಾಗುವ ಸೂಚನೆಗಳನ್ನು ನೀಡಿದೆ.
ಪರಮಾಣು ವ್ಯಾಪಾರಕ್ಕೆ ಪರಮಾಣು ಪೂರೈಕಾ ರಾಷ್ಟ್ರಗಳು ಭಾರತಕ್ಕೆ ವಿನಾಯತಿ ನೀಡಿದ ಐದು ದಿನಗಳ ನಂತರ , ಪರಮಾಣು ಒಪ್ಪಂದದ ಕರಡನ್ನು ಮತ್ತು ಇತರ ದಾಖಲೆಗಳನ್ನು ಶ್ವೇತಭವನವು ಕಾನೂನುತಜ್ಞರಿಗೆ ಸಲ್ಲಿಸಿತ್ತು.
|