ಪಂಜಾಬ್ ಪ್ರಾಂತ್ಯದಲ್ಲಿನ ತನ್ನ ಪಕ್ಷದ ಸರಕಾರದ ಉಚ್ಛಾಟನೆಯ ವಿರುದ್ಧ ಪಾಕಿಸ್ತಾನ ವಿರೋಧ ಪಕ್ಷ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ಎಚ್ಚರಿಕೆ ನೀಡಿದ್ದು, ಈ ಪ್ರಾಂತ್ಯದಲ್ಲಿನ ಎಲ್ಲಾ ರಾಜಕೀಯ ವಿವಾದಗಳನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ.
ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಕೆಲವರು ಅಸ್ಥಿರತೆಯನ್ನು ಉಂಟುಮಾಡುತ್ತಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಶರೀಫ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನ ಕೇಂದ್ರದಲ್ಲಿ ಪಿಎಂಎಲ್-ಪಕ್ಷವು ಪಿಪಿಪಿ ನೇತೃತ್ವದ ಸರಕಾರದಿಂದ ಹೊರನಡೆದಿದ್ದರೂ, ಪಂಜಾಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಪಕ್ಷದ ಭಾಗವು ಆಡಳಿತ ನಡೆಸುತ್ತಿದೆ. ಈ ಪ್ರಾಂತ್ಯದ ಸರಕಾರದಿಂದ ಹೊರನಡೆಯುವಂತೆ ಪಿಎಂಎಲ್-ಎನ್ ಪಿಪಿಪಿಗೆ ಒತ್ತಾಯಿಸುತ್ತಿದ್ದು, ಆದರೆ, ಪಿಪಿಪಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಪಂಜಾಬ್ ಸರಕಾರದ ಕುರಿತಾಗಿ ಪಿಎಂಎಲ್-ಎನ್ ಮತ್ತು ಪಿಪಿಪಿ ಪಕ್ಷವು ಕಳೆದ ಕೆಲವು ವಾರಗಳಲ್ಲಿ ವಾಗ್ಯುದ್ಧದಲ್ಲಿ ತೊಡಗಿದೆ.
ಪಂಜಾಬ್‌ನ ರಾಜಕೀಯ ವಿವಾದಗಳನ್ನು ಬಗೆಹರಿಸುವಂತೆ ಶರೀಫ್ ಪಿಪಿಪಿಗೆ ಒತ್ತಾಯಿಸಿದ್ದು, ಇದರೊಂದಿಗೆ, ಈ ಪ್ರಾಂತ್ಯದಲ್ಲಿ ತನ್ನ ಪಕ್ಷವನ್ನು ಉಚ್ಛಾಟಿಸುವ ಪ್ರಯತ್ನದ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ನಡುವೆ, ಪಿಎಂಎಲ್-ಕ್ಯೂ ಪಕ್ಷದೊಂದಿಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿರುವ ಶರೀಫ್, ಪಿಎಂಎಲ್-ಕ್ಯೂನೊಂದಿಗೆ ಮೈತ್ರಿ ಮಾಡುತ್ತಿದ್ದಲ್ಲಿ, ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲೇ ಮಾಡಬಹುದಿತ್ತು ಎಂದು ಹೇಳಿದ್ದಾರೆ.
|