ಆವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಉಂಟಾಗಿರುವ ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವ ಪಾಕಿಸ್ತಾನದ ಬಡ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ, ಪಾಕಿಸ್ತಾನಕ್ಕೆ 8.4 ದಶಲಕ್ಷ ಡಾಲರ್ ಆಹಾರ ನೆರವನ್ನು ನೀಡಲು ಅಮೆರಿಕ ನಿರ್ಧರಿಸಿರುವುದಾಗಿ ಅಮೆರಿಕ ರಾಯಭಾರಿ ಕಚೇರಿಯ ಹೇಳಿಕೆಗಳು ತಿಳಿಸಿವೆ.
ಅಮೆರಿಕ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಮತ್ತು ವಿಶ್ವ ಸಂಸ್ಥೆ ವಿಶ್ವ ಆರೋಗ್ಯ ಕಾರ್ಯಕ್ರಮದ (ಯುಎಸ್ಎಐಡಿ) ಮೂಲಕ ಈ ನೆರವನ್ನು ಪಾಕಿಸ್ತಾನಕ್ಕೆ ಕಳುಹಿಸಲಿದ್ದು, ಗುರುವಾರ ಇಸ್ಲಾಮಾಬಾದಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಅಮೆರಿಕದ ಈ ಯೋಜನೆಯು ಆವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಅನೇಕ ಪಾಕಿಸ್ತಾನೀಯರಿಗೆ ಸಹಾಯಕವಾಗಲಿದೆ ಎಂದು ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಪಾಕಿಸ್ತಾನದ ಅಮೆರಿಕ ರಾಯಭಾರಿ ಅನ್ನೆ ಡಬ್ಲ್ಯೂ ಪ್ಯಾಟರ್‌ಸನ್ ಹೇಳಿದ್ದಾರೆ.
ಪಾಕಿಸ್ತಾನ ಬುಡಗಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಹೆಚ್ಚಿನ ಪಾಕಿಸ್ತಾನ ಶಾಲಾಮಕ್ಕಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ಅಲ್ಲದೆ, ಈ ಕಾರ್ಯಕ್ರಮವು ಮಕ್ಕಳನ್ನು ಶಾಲೆಗೆ ಬರಲು ಉತ್ತೇಜಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಪ್ಪಂದದಂತೆ, ಅಮೆರಿಕ 32,000 ಶಾಲಾ ಮಕ್ಕಳು ಸೇರಿದಂತೆ ಸುಮಾರು 1.6 ದಶಲಕ್ಷ ಪಾಕಿಸ್ತಾನಿಯರಿಗೆ 11,000 ಮೆಟ್ರಿಕ್ ಟನ್ ಗೋಧಿಯನ್ನು ಒದಗಿಸಲಿದೆ. ವಾಯುವ್ಯ ಗಡಿ ಪ್ರಾಂತ್ಯ ಮತ್ತು ಬಲೋಚಿಸ್ತಾನ್‌ನ 12 ಜಿಲ್ಲೆಗಳಿಗೆ ಈ ತಿಂಗಳಲ್ಲಿ ಆಹಾರವನ್ನು ಪೂರೈಸಲಿದೆ ಎಂದು ಹೇಳಿಕೆಗಳು ತಿಳಿಸಿವೆ.
|