ಭಾರತದಲ್ಲಿ ಕ್ರೈಸ್ತ ಸಮುದಾಯ ವಿರುದ್ಧದ ಹಿಂಸಾಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಅಮೆರಿಕವು, ದೇಶಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಭಾರತ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಹಿಂಸಾಚಾರವನ್ನು ನಿಗ್ರಹಿಸುವಂತೆ ಎಲ್ಲಾ ಪಕ್ಷಗಳನ್ನೂ ಒತ್ತಾಯಿಸುತ್ತಿದ್ದು, ಅಲ್ಲದೆ, ದೇಶಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಮೂಲಕ ಭಾರತದ ದೀರ್ಘಾವಧಿಯ ಸಂಪ್ರದಾಯ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಉಳಿಸಿಕೊಳ್ಳುವಂತೆ ಅಮೆರಿಕ ಆಗ್ರಹಿಸುತ್ತದೆ ಎಂದು ಲಾರ್ಜ್ ಫಾರ್ ಇಂಟರ್‌ನ್ಯಾಷನಲ್ ರಿಲೀಜಿಯಸ್ ಫ್ರೀಡಂನ ಹಾನ್‌ಫಾರ್ಡ್ ತಿಳಿಸಿದ್ದಾರೆ.
ಪ್ರತಿವರ್ಷ ಅಮೆರಿಕ ಕಾಂಗ್ರೆಸ್‌ನಿಂದ ಆದೇಶಿಸಲ್ಪಡುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಹತ್ತನೇ ವಾರ್ಷಿದ ವಿದೇಶಾಂಗ ವಿಭಾಗದ ವರದಿ ಸಲ್ಲಿಕೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.
ಪಂಥೀಯ ಸಾಮರಸ್ಯ ಪ್ರೋತ್ಸಾಹದ ಕೇಂದ್ರ ಸರಕಾರದ ಪ್ರಯತ್ನದ ನಡುವೆಯೂ, ಭಾರತದ ಒರಿಸ್ಸಾ,ಕರ್ನಾಟಕ ರಾಜ್ಯದಲ್ಲಿ ಕ್ರೈಸ್ತ ಪಂಗಡಗಳ ಮೇಲೆ ದೌರ್ಜನ್ಯ ಉಂಟಾಗಿರುವುದು ಕಂಡುಬಂದಿದ್ದು, ಧಾರ್ಮಿಕ ವಿಚಾರಗಳೊಂದಿಗೆ, ಸಾಮಾಜಿಕ, ಆರ್ಥಿಕ ಮತ್ತು ಜನಾಂಗೀಯ ಭಿನ್ನಾಭಿಪ್ರಾಯಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ ಎಂದು ಹಾನ್‌ಫಾರ್ಡ್ ಅಭಿಪ್ರಾಯಪಟ್ಟಿದ್ದಾರೆ.
ಇದರೊಂದಿಗೆ, ಪ್ರಮುಖ ಹಿಂದೂ ಧಾರ್ಮಿಕ ನಾಯಕನ ಹತ್ಯೆಯ ಬಗ್ಗೆಯೂ ಅಮೆರಿಕ ಕಳವಳ ಹೊಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಂದು ಧರ್ಮದ ಹೆಚ್ಚಿನ ಜನರು ಶಾಂತಿ ಸಹಬಾಳ್ವೆಯಿಂದ ಭಾರತದಲ್ಲಿ ಜೀವನ ನಡೆಸುತ್ತಿದ್ದು, ಆದರೆ, ಪ್ರತ್ಯೇಕವಾಗಿ ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯ ಸರಕಾರದಲ್ಲಿ ಸಂಘಟಿತ ಧಾರ್ಮಿಕ ಸಂಘಟನೆಗಳು ಅಲ್ಪ ಸಂಖ್ಯಾತರ ವಿರುದ್ಧ ದಾಳಿ ನಡೆಸುತ್ತಿವೆ ಎಂಬ ಆರೋಪವಿದೆ ಎಂದು ಅವರು ಸೂಚಿಸಿದ್ದಾರೆ.
|