ತುರ್ತು ಪರಿಸ್ಥಿತಿ ಆಡಳಿತದ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಪ್ರಯತ್ನವೆಂಬಂತೆ, ಬಾಂಗ್ಲಾ ಮಾಜಿ ಪ್ರಧಾನಿಗಳಾದ ಶೇಖ್ ಹಸೀನಾ ಮತ್ತು ಅವರ ವೈರಿ ಖಲೀದಾ ಜಿಯಾ ಅವರು, ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾತುಕತೆಗೆ ಮುಂದಾಗಿದ್ದಾರೆ.
ಎರಡೂ ನಾಯಕರು ಸಂಧಾನಕ್ಕೆ ಸಿದ್ಧರಾಗಿದ್ದಾರೆ. ಈ ಮಾತುಕತೆಯು ಯಾವುದೇ ಶರತ್ತನ್ನು ಒಳಗೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ರಫೀಕ್ ಅಲ್ ಹಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ
ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಪ್ರಧಾನ ಚುನಾವಣೆಯ ಮುಂದಾಗಿ ಉನ್ನತ ನಾಯಕರ ಈ ಮಾತುಕತೆಯು, ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವ ಯೋಜನೆಯಲ್ಲಿನ ಪ್ರಮುಖ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಿವಿನೋವಿನಿಂದ ಬಳಲುತ್ತಿದ್ದ ಹಸೀನಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಮೂರು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿದ್ದು, ಕಳೆದ ತಿಂಗಳು ಜಿಯಾ ಅವರು ಜಾಮೀನಿನ ಮೂಲಕ ಬಿಡುಗಡೆ ಹೊಂದಿದ್ದರು.
ಕಳೆದ ಎರಡು ದಶಕಗಳಲ್ಲಿ ನಾಗರಿಕ ಸಮಾಜ ಮತ್ತು ವ್ಯವಹಾರ ಉದ್ಯಮಿಗಳ ಮನವಿಯ ನಡುವೆಯೂ, ಬಾಂಗ್ಲಾದೇಶದ ಎರಡು ಪ್ರಮುಖ ನಾಯಕಿಯರು ರಾಜಿ ಸಂಧಾನವನ್ನು ನಿರಾಕರಿಸಿದ್ದರು.
|