ಪಾಕಿಸ್ತಾನ ಸರಕಾರವು ಹಣಕಾಸಿನ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿರುವಾಗ, ಉಗ್ರಗಾಮಿಗಳ ವಿರುದ್ಧದ ಹೋರಾಟದ ಹೆಸರಿನಲ್ಲಿ ಪಾಕಿಸ್ತಾನ ನೆಲದಲ್ಲಿ ಇತರ ರಾಷ್ಟ್ರಗಳ ಆಕ್ರಮಣವನ್ನು ಪಾಕಿಸ್ತಾನ ಸಹಿಸುವುದಿಲ್ಲ ಎಂದು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸ್ಪಷ್ಟಪಡಿಸಿದ್ದಾರೆ.
ಸಂಸತ್‌ನಲ್ಲಿ ಶನಿವಾರ ಪ್ರಥಮ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ತನ್ನ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿ ಸಂಬಂಧವನ್ನು ಪಾಕಿಸ್ತಾನವು ಬಯಸುತ್ತಿದ್ದು, ಇದರೊಂದಿಗೆ ಭಾರತದೊಂದಿಗೆ ಉತ್ತಮ ಸಂಬಂಧ ಮರುನಿರ್ಮಾಣವಾಗುವುದನ್ನು ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ.
ದೋಷಾರೋಪಣೆ ಬೆದರಿಕೆಯಿಂದಾಗಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಆಗಸ್ಟ್ ತಿಂಗಳಲ್ಲಿ ಅಧ್ಯಕ್ಷೀಯ ಸ್ಥಾನ ತ್ಯಜಿಸಿದ ನಂತರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜರ್ದಾರಿ ಗೆಲುವು ಸಾಧಿಸಿದ್ದರು. ಅಮೆರಿಕ ನೇತೃತ್ವದ ಉಗ್ರವಾದದ ವಿರುದ್ಧದ ಆಂದೋಲನಕ್ಕೆ ತಾನು ಸಹಕರಿಸುವುದಾಗಿ ಜರ್ದಾರಿ ಇದೇ ವೇಳೆ ಭರವಸೆ ನೀಡಿದ್ದರು.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಪಾರುಪತ್ಯವನ್ನು ಸಹಿಸದಾದ ಅಮೆರಿಕವು, ಆರು ಕ್ಷಿಪಣಿ ದಾಳಿಯೊಂದಿಗೆ ಪಾಕಿಸ್ತಾನದಲ್ಲಿನ ಉಗ್ರರ ಮೇಲೆ ದಾಳಿಯನ್ನು ಪ್ರಾರಂಭಿಸಿತ್ತು.
ಜರ್ದಾರಿ ಅಮೆರಿಕ ದಾಳಿಯನ್ನು ಉಲ್ಲೇಖಿಸದಿದ್ದರೂ, ಪಾಕಿಸ್ತಾನ ಪ್ರದೇಶದೊಳಗಿನ ದಾಳಿಯು ಸ್ವೀಕಾರಾರ್ಹವಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಸಾರ್ವಭೌಮತೆಯಲ್ಲಿ ಮತ್ತು ಪ್ರಾದೇಶಿಕ ಸಮಗ್ರತೆಯಲ್ಲಿ ಭಯೋತ್ಪಾದನೆ ನಿಗ್ರಹ ಹೆಸರಿನಲ್ಲಿ ಯಾವುದೇ ಆಡಳಿತ ಶಕ್ತಿಗಳ ಆಕ್ರಮಣವನ್ನು ಪಾಕಿಸ್ತಾನವು ಸಹಿಸುವುದಿಲ್ಲ ಎಂದು ಜರ್ದಾರಿ ಇದೇ ವೇಳೆ ಪುನರುಚ್ಛರಿಸಿದ್ದಾರೆ.
|