ಚೀನಾದಲ್ಲಿ ಕಳಪೆ ಹಾಲಿನ ಪುಡಿ ಹಗರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ರಾಸಾಯನಿಕ ಮಿಶ್ರಿತ ಹಾಲು ಸೇವನೆಯಿಂದ ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆಯು 53,000ಕ್ಕೇರಿದೆ. ಇದು ದೇಶದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ಎರಡು ವಾರಗಳಲ್ಲಿ ಎರಡು ಮತ್ತು ಅದಕ್ಕಿಂತಲೂ ಕೆಳವಯಸ್ಸಿನ 12,892 ಮಕ್ಕಳಲ್ಲಿ ಶೇ.80ರಷ್ಟು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆಗಳು ತಿಳಿಸಿವೆ.
ಚೀನಾ ಹಾಲು ಉತ್ಪನ್ನ ಉತ್ಪಾದಕಾ ಸಂಸ್ಥೆಯೊಂದರ ಹಾಲು ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದು, ಈ ಹಾಲಿನಲ್ಲಿ ರಾಸಾಯನಿಕ ಪದಾರ್ಥ ಮಿಶ್ರ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಅಸ್ವಸ್ಥ ಮಕ್ಕಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಚೀನಾವು ಆತಂಕಗೊಂಡಿದ್ದು, ಡೈರಿ ಕಂಪನಿಗಳು ಹೆಚ್ಚು ಸಾಮಾಜಿಕ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು ಎಂದು ಚೀನಾ ಪ್ರಧಾನಿ ವೆನ್ ಜಿಯಾಬೋ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.
ಅಲ್ಲದೆ, ದೇಶದಲ್ಲಿ ಆಹಾರ ಸುರಕ್ಷತೆಯನ್ನು ಹೆಚ್ಚಿಸಲು ಸರಕಾರವು ಹೆಚ್ಚಿನ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.
|