ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಮಹಮ್ಮದ್ ಸೈಯೀದ್ ನೇತೃತ್ವದ ಸಂಘಟನಾ ಕಾರ್ಯಕರ್ತರು ಅಮೆರಿಕದ ವಿರುದ್ಧ ಜಿಹಾದ್‌ಗೆ ಕರೆ ನೀಡಲು ವಾಯುವ್ಯ ಪಾಕಿಸ್ತಾನದ ಪೇಶಾವರ ನಗರದಲ್ಲಿನ ಮಸೀದಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನು ಮಾಧ್ಯಮ ವರದಿಗಳು ಬಹಿರಂಗಗೊಳಿಸಿವೆ.
ಲಷ್ಕರ್-ಎ-ತೊಯ್ಬಾವನ್ನು ಪಾಕಿಸ್ತಾನ ಸರಕಾರವು ನಿಷೇಧಿಸಿದ ನಂತರ, ಸೈಯೀದ್‌ನಿಂದ ಸ್ಥಾಪಿಸಲ್ಪಟ್ಟ ಜಮತ್-ಉದ್-ದಾವಾದ ಸದಸ್ಯರು ಹಯಾತಾಬಾದ್ ಮತ್ತು ಯುನಿವರ್ಸಿಟಿ ನಗರಗಳಲ್ಲಿ ನಿರ್ವಹಣೆಯನ್ನು ಮಾಡುತ್ತಿದ್ದು, ಇಲ್ಲಿನ ಮಸೀದಿಗಳಲ್ಲಿ ಜನರಿಗೆ ಜಿಹಾದ್‌ನ ಪ್ರಾಮುಖ್ಯತೆಯ ಬಗ್ಗೆ ವಿವರಣೆ ನೀಡುತ್ತಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.
ವಿವಿಧ ಮಸೀದಿಗಳಲ್ಲಿನ ಭಕ್ತಾದಿಗಳಲ್ಲಿ ಅಮೆರಿಕ ವಿರುದ್ಧ ಪವಿತ್ರ ಕದನ ಸಾರುವಂತೆ ಈ ಕಾರ್ಯಕರ್ತರು ಕರೆ ನೀಡಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಮುಂಜಾನೆಯ ಪ್ರಾರ್ಥನೆಯ ನಂತರ, ಜಮತ್-ಉದ್-ದಾವಾದ ಕಾರ್ಯಕರ್ತರು ವಿಧರ್ಮಿಗಳ ವಿರುದ್ಧ ಜಿಹಾದ್‌ಗೆ ಕರೆ ನೀಡುತ್ತಾರೆ. ಪ್ರಾರಂಭದಲ್ಲಿ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಅಪಾಯ ಪರಿಸ್ಥಿತಿಯ ಕುರಿತಾಗಿ ಮಾತನಾಡಿ ನಂತರ ಜಿಹಾದ್ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಾರಂಭಿಸುತ್ತಾರೆ ಎಂದು ಇದೇ ಪ್ರದೇಶದ ಅನಾಮಿಕ ವ್ಯಕ್ತಿಯೊಬ್ಬನನ್ನು ಉಲ್ಲೇಖಿಸಿ ಪತ್ರಿತೆಗಳು ವರದಿ ಮಾಡಿವೆ.
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ರಾಜೀನಾಮೆ ನೀಡಿದಂದಿನಿಂದ ನಿಷೇಧಿತ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಪಾಕಿಸ್ತಾನದಾದ್ಯಂತ ತನ್ನ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
|