ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನ್ಯೂಯಾರ್ಕ್‌ಗೆ ಆಗಮಿಸಿರುವುದರೊಂದಿಗೆ, 19-2ಅಂತರದಲ್ಲಿ ಅಮೆರಿಕ ಸೆನೆಟ್ ವಿದೇಶಾಂಗ ವ್ಯವಹಾರ ಸಮಿತಿ ಮಂಗಳವಾರ ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಅನುಮೋದನೆ ನೀಡಿದ್ದು, ಇದು ಭಾರತ ಅಮೆರಿಕ ಅಣು ಒಪ್ಪಂದವು ಶೀಘ್ರ ಅಂತಿಮಗೊಳ್ಳುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಭಾರತ ಅಮೆರಿಕ ಪರಮಾಣು ಒಪ್ಪಂದವನ್ನು ಅಂತಿಮ ಕ್ಷಣದಲ್ಲಿ ತನ್ನ ಕಾರ್ಯಸೂಚಿಗೆ ಸೇರಿಸಿಕೊಂಡ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯು, 19-2 ಅಂತರದಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಅನುಮೋದನೆ ನೀಡಿತು.
ಸೆನೆಟರ್ ಬರ್ಬರಾ ಬಾಕ್ಸರ್(ಬದಲಿ ಮತದಾನ) ಮತ್ತು ರುಸೆಲ್ ಫೀನ್‌ಗೋಲ್ಡ್ ಈ ಇಬ್ಬರು ಕಾನೂನುತಜ್ಞರು ಒಪ್ಪಂದದ ವಿರುದ್ಧ ಮತ ಹಾಕಿದ್ದರು. ಇವರಿಬ್ಬರೂ ಡೆಮಾಕ್ರಟಿಕ್ ಪಕ್ಷದವರಾಗಿದ್ದಾರೆ.
ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಬರಾಕ್ ಒಬಾಮಾ ಮತ್ತು ಪ್ರಸಕ್ತ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯ ಮುಖ್ಯಸ್ಥರಾಗಿರುವ ಸೆನೆಟರ್ ಬಿಡೆನ್ ಒಪ್ಪಂದದ ಮುಂದುವರಿಕೆಗಾಗಿ ಬದಲಿ ಮತದಾನ ಮೂಲಕ ಮತ ಚಲಾಯಿಸಿದರು.
ಮತದಾನ ನಡೆದ ಕೂಡಲೇ, ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯ ಅಧ್ಯಕ್ಷ ಜೋ ಬಿಡೆನ್ ಈ ಕರಡನ್ನು ಓದಿ ಹೇಳಿದರು. ಬಿಡೆನ್ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಡೆಮಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದಾರೆ.
|