ಅಕ್ಟೋಬರ್ 21 ರಂದು ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆ ವ್ಯಾಪಾರವನ್ನು ಪ್ರಾರಂಭಿಸುವುದಾಗಿ ಭಾರತ ಮತ್ತು ಪಾಕಿಸ್ತಾನವು ಘೋಷಿಸಿದ್ದು, ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಅಥವಾ ನಿರ್ದೇಶನ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡುವುದರೊಂದಿಗೆ, ವಿಶ್ವಸಂಸ್ಥೆ ಪ್ರಧಾನ ಅಧಿವೇಶನದಲ್ಲಿ ತಮ್ಮ ಪ್ರಪ್ರಥಮ ಭೇಟಿಯ ವೇಳೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಹೊಸ ಆಶಾವಾದವನ್ನು ಮೂಡಿಸಿದರು.
ಜಮ್ಮು ಮತ್ತು ಕಾಶ್ಮೀರ ವಿವಾದ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ವಿವಾದಗಳಿಗೆ ಶಾಂತಿ ಪರಿಹಾರ ಮತ್ತು ತೃಪ್ತಿಕರ ಇತ್ಯರ್ಥ ಕ್ರಮಗಳನ್ನು ಇದೇ ವೇಳೆ ಅನಾವರಣಗೊಳಿಸಿದ್ದು, ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಅಡ್ಡಗಾಲು ಹಾಕುತ್ತಿರುವವರ ದಮನಕ್ಕೆ ಎರಡೂ ನಾಯಕರು ಪಣತೊಟ್ಟರು.
ಉಭಯ ನಾಯಕರು ಹಂಚಿಕೊಂಡ ದ್ವಿಪಕ್ಷೀಯ ಸಂಬಂಧಗಳ ದೂರದೃಷ್ಟಿಯಲ್ಲಿ ಹಿಂಸಾಚಾರ, ದ್ವೇಷ ಮತ್ತು ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ನ್ಯೂಯಾರ್ಕ್‌ನ ಖಾಸಗಿ ಹೋಟೇಲ್‌ನಲ್ಲಿ ನಡೆದ ಈ ಜಂಟಿ ಮಾತುಕತೆಯಲ್ಲಿ ಎರಡೂ ನಾಯಕರು ಸ್ಪಷ್ಟಪಡಿಸಿದರು.
ಗಡಿ ನಿಯಂತ್ರಣ ರೇಖೆಯಲ್ಲಿನ ಭಯೋತ್ಪಾದನೆ ಮತ್ತು ಕದನ ವಿರಾಮ ಕಲಹ ಮುಂತಾದವುಗಳಿಗೆ ಸಂಬಂಧಿಸಿದ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಿಬಿಡೋಣ ಎಂಬುದಾಗಿ ಭಾರತಕ್ಕೆ ಮನವೊಲಿಸಲು ಜರ್ದಾರಿ ಪ್ರಯತ್ನಿಸುತ್ತಿರುವಂತೆ ಮಾತುಕತೆಯ ವೇಳೆ ಕಂಡುಬಂದಿದ್ದು, ಭಯೋತ್ಪಾದನೆಯನ್ನು ಹೊಡೆದೋಡಿಸಲು ಪಾಕಿಸ್ತಾನ ಸರಕಾರವು ಬದ್ಧವಾಗಿದೆ ಎಂಬುದಾಗಿ ಜರ್ದಾರಿ ಭರವಸೆ ನೀಡಿದರು.
ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿಯಲ್ಲಿ ಐಎಸ್ಐ ಕೈವಾಡದ ಶಂಕೆಯ ಕುರಿತಂತೆ ಕಾಬೂಲ್ ದಾಳಿ ಸೇರಿದಂತೆ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಜಂಟಿ ಭಯೋತ್ಪಾದನಾ ವಿರೋಧಿ ತಂತ್ರದ ವಿಶೇಷ ಸಭೆಯನ್ನು ಆಯೋಜಿಸಲು ಎರಡೂ ನಾಯಕರು ಇದೇ ವೇಳೆ ನಿರ್ಧರಿಸಿದರು.
ಶ್ರೀನಗರ-ಮುಜಾಫರ್‌ಬಾದ್ ಮತ್ತು ಪೂಂಚ್-ರಾವಲ್ಕೋಟ್ ರಸ್ತೆಗಳಲ್ಲಿ ಅಕ್ಟೋಬರ್ 21,2008ರಂದು ಎಲ್ಒಸಿ ವ್ಯಾಪಾರವನ್ನು ಪ್ರಾರಂಬಿಸಲು ಎರಡೂ ದೇಶಗಳು ಇದೇ ವೇಳೆ ಒಪ್ಪಿಗೆ ಸೂಚಿಸಿವೆ.
|