ಅಮೆರಿಕ ಗಂಭೀರ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸರಕಾರವು ಇದರ ವಿರುದ್ಧ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಇದು ದೇಶದಲ್ಲಿ ದೀರ್ಘಾವಧಿಯ ಆರ್ಥಿಕ ಹೊಡೆತ ಉಂಟುಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್‌ನೊಂದಿಗಿನ ಮಾತುಕತೆಯ ನಂತರ 700 ಶತಕೋಟಿ ಡಾಲರ್ ಹಣಕಾಸು ಸುರಕ್ಷತಾ ಸಹಕಾರವನ್ನು ನೀಡುತ್ತಿರುವುದಾಗಿ ಮಾಧ್ಯಮ ಸಂದರ್ಶನವೊಂದರಲ್ಲಿ ಜನತೆಗೆ ಸ್ಪಷ್ಟಪಡಿಸಿದ ಬುಷ್, ಹಣಕಾಸು ಕ್ಷೇತ್ರದಲ್ಲಿ ಸರಕಾರದ ಮಧ್ಯಪ್ರವೇಶವನ್ನು ವಿರೋಧಿಸುವುದು ತನ್ನ ಸಹಜ ಒಲವಾಗಿತ್ತು ಆದರೆ, ಹಣಕಾಸು ಪ್ರಕ್ಷುಬ್ಧತೆಯು ವಿಭಿನ್ನ ದೃಷ್ಟಿಯನ್ನು ಉಂಟುಮಾಡಿದೆ ಎಂದಿದ್ದಾರೆ.
ಮಾರುಕಟ್ಟೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸರ್ವವ್ಯಾಪಿ ವಿಶ್ವಾಸಮಟ್ಟ ಕುಸಿತ ಉಂಟಾಗುವುದರೊಂದಿಗೆ, ಹಣಕಾಸು ಕ್ಷೇತ್ರಗಳು ವಹಿವಾಟು ಸ್ಥಗಿತಗೊಳಿಸುವ ಭೀತಿಯನ್ನು ಹೊಂದಿವೆ ಒಟ್ಟಾರೆ ಸಂಪೂರ್ಣ ಅಮೆರಿಕ ಆರ್ಥಿಕತೆಯು ಅಪಾಯದಲ್ಲಿದೆ ಎಂದು ಬುಷ್ ತಿಳಿಸಿದ್ದಾರೆ.
ಪ್ರಸಕ್ತ ಉಂಟಾಗುತ್ತಿರುವ ಹಣಕಾಸು ಒತ್ತಡದಿಂದಾಗಿ, ಬ್ಯಾಂಕ್ ವಹಿವಾಟುಗಳು ಮಂದಗೊಳ್ಳುವುದರೊಂದಿಗೆ ಶೇರುಪೇಟೆ ಕುಸಿತ ಉಂಟಾಗುತ್ತದೆ ಅಲ್ಲದೆ, ವ್ಯವಹಾರ ನಷ್ಟ, ಉದ್ಯೋಗ ಕಡಿತ ಮುಂತಾದವುಗಳಿಗೆ ಹಾದಿ ಮಾಡಿಕೊಡುತ್ತದೆ. ಕೊನೆಯದಾಗಿ, ಇದು ದೇಶವನ್ನು ದೀರ್ಘಾವಧಿಯ ಆರ್ಥಿಕ ಹಿಂಜರಿತಕ್ಕೆ ತಳ್ಳುತ್ತದೆ. ಇಂತಹ ಪರಿಸ್ಥಿತಿ ಉಂಟಾಗಲು ಅವಕಾಶ ನೀಡಬಾರದು ಎಂದು ಬುಷ್ ಜನತೆಗೆ ಕರೆ ನೀಡಿದ್ದಾರೆ.
ಮಾಧ್ಯಮದೊಂದಿಗಿನ ತನ್ನ ಭಾಷಣದ ಎರಡು ಗಂಟೆಗಳ ಮೊದಲು, ಹಣಕಾಸು ಸುರಕ್ಷತಾ ಯೋಜನೆಯ ಕುರಿತಾಗಿ ಕಾಂಗ್ರೆಸ್ ನಾಯಕರು ಮತ್ತು ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕ್‌ಕೈನ್ ಅವರೊಂದಿಗೆ ಮಾತುಕತೆ ನಡೆಸಲು, ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ಅವರಿಗೆ ಶ್ವೇತಭವನಕ್ಕೆ ಆಹ್ವಾನಿಸಿದ್ದರು.
|