ನಾಗರಿಕ ಪರಮಾಣು ಇಂಧನದ ಬಳಕೆಯಲ್ಲಿ ಪರಸ್ಪರ ಸಹಕಾರ ವೃದ್ಧಿಗಾಗಿ ಭಾರತ ಮತ್ತು ಚೀನಾವು ಒಪ್ಪಿಗೆ ಸೂಚಿಸಿದ್ದು, ದ್ವಿಪಕ್ಷೀಯ ಸಂಬಂಧದಲ್ಲಿ ಒಡಕಿಗೆ ಕಾರಣವಾಗಿರುವ ಗಡಿ ಸಮಸ್ಯೆಯ ಕುರಿತಾದ ಮಾತುಕತೆಯಲ್ಲಿನ ಅಭಿವೃದ್ಧಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿವೆ.
ವಿಶ್ವಸಂಸ್ಥೆ ಪ್ರಧಾನ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಚೀನಾ ಸಹೋದ್ಯೋಗಿ ವೆನ್ ಜಿಯಾಬೋ ಇಲ್ಲಿನ ವಾಲ್‌ಡೋರ್ಫ್ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದರು.
ಈ ತಿಂಗಳ ಪ್ರಾರಂಭದಲ್ಲಿ ವಿಯೆನ್ನಾದಲ್ಲಿ ಭಾರತಕ್ಕೆ ಪರಮಾಣು ವಿನಾಯತಿ ಕಲ್ಪಿಸುವ ಸಂಬಂಧ ನಡೆದ ಎನ್ಎಸ್‌ಜಿ ಸಭೆಯ ವೇಳೆಗಿನ ಚೀನಾದ ಅಸಹಕಾರ ಕುರಿತಂತೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಒಡಕು ಉಂಟಾಗಿರುವುದರ ನಡುವೆಯೂ ಈ ಮಾತುಕತೆ ನಡೆದಿತ್ತು.
ಪರಮಾಣು ಇಂಧನದ ನಾಗರಿಕ ಬಳಕೆಯಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ಮಾತುಕತೆಯ ವೇಳೆ ಎರಡೂ ನಾಯಕರು ಒಪ್ಪಿಗೆ ಸೂಚಿಸಿದರು.
ಈ ನಡುವೆ, ಭಾರತ ಚೀನಾ ನಡುವಿನ ಗಡಿ ವಿವಾದವನ್ನು ಕ್ಲಿಷ್ಟಕರ ಸಮಸ್ಯೆ ಎಂಬುದಾಗಿ ಉಭಯ ನಾಯಕರು ಬಣ್ಣಿಸಿರುವುದಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
|