ಸುಮಾರು 60 ಮಂದಿಯ ಸಾವಿಗೆ ಕಾರಣವಾದ ಮ್ಯಾರಿಯಟ್ ಬಾಂಬ್ ಸ್ಫೋಟದ ಆಘಾತದಿಂದ ಪಾಕಿಸ್ತಾನ ಜನತೆ ಚೇತರಿಸಿಕೊಳ್ಳುತ್ತಿರುವಾಗಲೇ, ದೇಶದ ಕೇಂದ್ರ ಭಾಗದ ರೈಲಿನಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಸುಮಾರು ಆರು ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಪೂರ್ವ ಪಂಜಾಬ್ ಪ್ರಾಂತ್ಯದ ಹಾಸಿಲ್ಪುರ್‌ದಲ್ಲಿ ಈ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಾಕಿಸ್ತಾನ ರೈಲ್ವೇಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಶೀರ್ ಖುರೇಶಿ ತಿಳಿಸಿದ್ದಾರೆ.
ರೈಲ್ವೇ ಹಳಿಯಲ್ಲಿ ಸ್ಫೋಟಕಗಳನ್ನು ಇಡಲಾಗಿದ್ದು, ಇದು ರೈಲು ಸ್ಫೋಟಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ದಾಳಿಯ ಕುರಿತಾಗಿ ಪಾಕಿಸ್ತಾನ ಸರಕಾರಕ್ಕೆ ಪೂರ್ವ ಮಾಹಿತಿ ದೊರೆತಿತ್ತೇ ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
|