ಪರಸ್ಪರ ಮಾತುಕತೆ ನಡೆಸುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಹೇಳಿದ್ದಾರೆ. ಕಾಶ್ಮೀರದಂತಹ ವಿಷಯಗಳ ಕುರಿತು ಪರಸ್ಪರ ಚರ್ಚಿಸಿ ಎರಡೂ ದೇಶಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
"ನಾವು ಪರಸ್ಪರರ ಹಿತಾಸಕ್ತಿಯನ್ನು ಗೌರವಿಸಿ ಒಟ್ಟಾಗಿ ಕೆಲಸ ಮಾಡಬೇಕಿದೆ ಮತ್ತು ಆ ಮೂಲಕ ಏಷಿಯಾವನ್ನು ವ್ಯಾಪಾರ ಮತ್ತು ವ್ಯವಹಾರಗಳ ಪ್ರಧಾನ ಮಾರುಕಟ್ಟೆಯಾಗಿ ರೂಪಿಸಬೇಕಾಗಿದೆ." ಎಂದು ಜರ್ದಾರಿ 192 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಮಾತನಾಡಿದರು. ಇದಕ್ಕಿಂತ ಮೊದಲು ಅವರು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಜತೆ ಸುದೀರ್ಘ ಮಾತುಕತೆ ನಡೆಸಿದ್ದರು.
ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಮನ್ವತೆಯಿದ್ದಲ್ಲಿ ಗಡಿ ಪ್ರದೇಶದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ತನ್ನ ಇಪ್ಪತ್ತು ನಿಮಿಷಗಳ ಭಾಷಣವನ್ನು ಅವರು ಭಯೋತ್ಪಾದನೆಯನ್ನು ಹೋಗಲಾಡಿಸುವಲ್ಲಿ ತಮ್ಮ ದೇಶದ ಭದ್ದತೆ ಬಗೆಗೆ ಮತ್ತು ಹತ್ಯೆಗೀಡಾದ ತಮ್ಮ ಪತ್ನಿ ಮಾಜಿ ಪ್ರಧಾನಿಯೂ ಆದ ಬೆನ್‌ಜೀರ್ ಬುಟ್ಟೋರನ್ನು ಸಾಧನೆಯನ್ನು ನೆನಪಿಸುವುದಕ್ಕಾಗಿ ಮೀಸಲಿಟ್ಟಿದ್ದರು.
ಭಯೋತ್ಪಾದನೆಯನ್ನು ಹೋಗಲಾಡಿಸಿಲು ಪಾಕಿಸ್ತಾನ ತನ್ನ ಎಲ್ಲಾ ಸಶಸ್ತ್ರ ಪಡೆಗಳನ್ನು ಮೀಸಲಿಡುವುದಕ್ಕೆ ಸಿದ್ದವಿದೆ ಎಂದು ಅವರು ತಿಳಿಸಿದರು.
ಯುಎಸ್‌ನ ಹೆಸರು ಹೇಳದೇ ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಪೆಟ್ಟು ನೀಡುವ ಯಾವುದೇ ರಾಷ್ಟ್ರದ ನಡೆಯನ್ನು ತಾವು ಸಹಿಸುವುದಿಲ್ಲ ಎಂದು ಇತ್ತೀಚೆಗೆ ಯುಎಸ್‌ನ ಮಿಲಿಟರಿ ಶಕ್ತಿಗಳು ಪಾಕಿಸ್ತಾನದ ಮೇಲೆ ಮಾಡುತ್ತಿರುವ ಆಕ್ರಮಣದ ಕುರಿತಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
|