ನಿರಂತರ ಭಯೋತ್ಪಾದಕ ದಾಳಿಯಿಂದಾಗಿ ಅಸಹಾಯಕ ಪರಿಸ್ಥಿತಿಯಲ್ಲಿರುವ ಪಾಕಿಸ್ತಾನದಲ್ಲಿ ಸ್ಥಿರತೆ, ಶಾಂತಿ ಹಾಗೂ ದೇಶದ ಅಭಿವೃದ್ಧಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲು, ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಯುಎಇ ಮತ್ತು ಜಪಾನ್ ಸೇರಿದಂತೆ 12 ರಾಷ್ಟ್ರಗಳ ಸಮೂಹವೊಂದನ್ನು ರಚಿಸಲು ಶುಕ್ರವಾರ ನಿರ್ಧರಿಸಿವೆ.
'ಪಾಕಿಸ್ತಾನದ ಗೆಳೆಯರು' ಎಂಬ ಹೆಸರಿನ ಈ ಸಮೂಹದ ಮೊದಲ ಸಭೆಯು ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯ ನ್ಯೂಯಾರ್ಕ್‌ನಲ್ಲಿ ನಡೆದಿದ್ದು, ಇದರಲ್ಲಿ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್, ಟರ್ಕಿ ಮತ್ತು ಯುಎಇ ರಾಷ್ಟ್ರಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು.
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಂದ್ ಮತ್ತು .ಯುಎಇ ವಿದೇಶಾಂಗ ಸಚಿವ ಅಲ್ ನುಹಯ್ಯನಾ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಚೀನಾ ಪ್ರತಿನಿಧಿಗಳು ಮತ್ತು ಯುರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿಗಳೂ ಭಾಗವಹಿಸಿದ್ದರು.
ಪಾಕಿಸ್ತಾನದಲ್ಲಿ ಸ್ಥಿರತೆಯನ್ನು ಉಂಟುಮಾಡುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸಮುದಾಯಗಳು ಸಹಕಾರ ನೀಡಲಿವೆ ಎಂಬುದಾಗಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಾಕಿಸ್ತಾನ ಜನತೆಗೆ ಭರವಸೆ ನೀಡಿರುವುದಾಗಿ ಸಭೆಯ ನಂತರ ರೈಸ್ ಸುದ್ದಿಗಾರರಿಗೆ ತಿಳಿಸಿದರು.
ಈ ಅಂತಾರಾಷ್ಟ್ರೀಯ ಸಮೂಹವು ಪಾಕಿಸ್ತಾನಕ್ಕೆ ಸದೃಢ ರಾಜಕೀಯ ಬೆಂಬಲ ಜೊತೆಗೆ ಪಾಕಿಸ್ತಾನ ಸರಕಾರಕ್ಕೆ ಪ್ರಾಯೋಗಿಕ ಬೆಂಬಲವನ್ನೂ ನೀಡಲಿದೆ ಎಂದು ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿಗಳು ಇದೇ ವೇಳೆ ತಿಳಿಸಿದ್ದಾರೆ.
ಶನಿವಾರ ನಡೆದ ಈ ಸಭೆಯಲ್ಲಿ ಕಳೆದ ಶನಿವಾರ ಇಸ್ಲಾಮಾಬಾದ್ ಮರಿಯಟ್ ಬಾಂಬ್ ಸ್ಫೋಟದಲ್ಲಿ ಮೃತರಾದವರಿಗೆ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು.
|