ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ ಕ್ರೀಕ್ ವಿವಾದವನ್ನು ಭಾರತ ಮತ್ತು ಪಾಕಿಸ್ತಾನವು ಸದ್ಯದಲ್ಲಿಯೇ ಪರಿಹರಿಸಲಿದೆ ಎಂದು ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೆಹ್ಮೂದ್ ಕಾಸೂರಿ ತಿಳಿಸಿದ್ದಾರೆ.
ಸರ್ ಕ್ರೀಕ್ ಕುರಿತಂತೆ, ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಒಪ್ಪಂದವೊಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಕಾಸೂರಿ ಸುದ್ದಿಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜಂಟಿ ನಕಾಶೆ ಮತ್ತು ಸಮೀಕ್ಷೆಯನ್ನು ನಡೆಸಲಾಗಿದ್ದು, ಉಭಯ ದೇಶಗಳ ನಡುವಿನ ಸಮಸ್ಯೆ ಪರಿಹಾರಕ್ಕಾಗಿ ಎರಡೂ ದೇಶಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಇದರೊಂದಿಗೆ, ಸಿಯಾಚಿನ್ ಪ್ರದೇಶದಲ್ಲಿನ ಸೇನಾ ಬಿಕ್ಕಟ್ಟಿನ ಸಂಬಂಧ ಉಭಯ ದೇಶಗಳ ನಡುವಿನ ಸಮಸ್ಯೆಗಳೂ ಶೇ.70-80ರಷ್ಟು ಪರಿಹಾರಗೊಳ್ಳಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. |
|