ಪಾಕಿಸ್ತಾನದ ಮೇಲಿನ ತನ್ನ ನಿಲುವನ್ನು ಮೃದುಗೊಳಿಸಿರುವ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಉತ್ತಮ ಉದ್ದೇಶ ಮತ್ತು ನೀತಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದು, ಜರ್ದಾರಿ ಅವರಿಗೆ ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಸಮೂಹದೊಂದಿಗೆ ಮನವಿ ಮಾಡಿದ್ದಾರೆ.
ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದಕ್ಕೆ ಮತ್ತು ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಪಾಕಿಸ್ತಾನವನ್ನು ದೂಷಿಸುತ್ತಿದ್ದ ಕರ್ಜಾಯ್, ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಬೆಂಬಲ ಮತ್ತು ಸಹಕಾರವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
'ನಮ್ಮ ಬೆಂಬಲ ಪಡೆಯಲು ಜರ್ದಾರಿ ಅರ್ಹರಾಗಿದ್ದಾರೆ. ಅವರ ಮೇಲೆ ನನಗೆ ಪೂರ್ಣ ನಂಬಿಕೆಯಿದೆ' ಎಂದು ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಕರ್ಜಾಯ್ ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಕೈವಾಡ ಹೊಂದಿರುವ ಶಂಕೆಯಿರುವ ದೇಶದ ಶಕ್ತಿಯುತ ಗುಪ್ತಚರ ಸಂಸ್ಥೆಯನ್ನು ಜರ್ದಾರಿ ನಿಯಂತ್ರಿಸಬಲ್ಲರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಅಂತಾರಾಷ್ಟ್ರೀಯ ಸಮುದಾಯಗಳು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.
' ಅವರು ಸೂಕ್ತ ಉದ್ದೇಶವನ್ನು ಹೊಂದಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅವರು ಅಂತಾರಾಷ್ಟ್ರೀಯ ಸಮುದಾಯದ ಪರವಾಗಿದ್ದಾರೆ. ಅದು ಪಾಕಿಸ್ತಾನಕ್ಕೂ ಒಳ್ಳೆಯದು' ಎಂದು ಕರ್ಜಾಯ್ ಸ್ಪಷ್ಟಪಡಿಸಿದ್ದಾರೆ. |
|