ದಿವಾಳಿ ಅಂಚಿಗೆ ತಲುಪಿರುವ ಅಮೆರಿಕ ಹಣಕಾಸು ಸಂಸ್ಥೆಗಳನ್ನು ರಕ್ಷಿಸುವ ಸಲುವಾಗಿ ಬುಷ್ ಆಡಳಿತವು ಸಲ್ಲಿಸಿದ್ದ 700 ಶತಕೋಟಿ ಡಾಲರ್ ಹಣಕಾಸು ಸುರಕ್ಷತಾ ಯೋಜನೆಗೆ ಅಮೆರಿಕ ಸಂಸತ್‌ನಲ್ಲಿ ಸೋಲುಂಟಾಗಿದ್ದು, ಈಗಾಗಲೇ ಹಣಕಾಸು ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬುಷ್ ಆಡಳಿತಕ್ಕೆ ಇದೊಂದು ಆಘಾತಕಾರಿ ಬೆಳವಣಿಗೆಯಾಗಿದೆ.
ಈ ಪ್ಯಾಕೇಜ್ ಪರ 205 ಮತಗಳು ಬಿದ್ದರೆ ಪ್ಯಾಕೇಜ್ ವಿರುದ್ಧ 208 ಮತಗಳು ಬಿದ್ದಿವೆ.
ಸಂಕಷ್ಟದಲ್ಲಿರುವ ಬ್ಯಾಂಕ್‌ಗಳಿಗೆ ಸುಮಾರು 700 ಶತಕೋಟಿ ಡಾಲರ್ ನೆರವು ನೀಡಲು ಬುಷ್ ಆಡಳಿತವು ಸಂಸತ್‌ನಲ್ಲಿ ಮಂಡಿಸಿದ್ದ ಪ್ರಸ್ತಾಪವನ್ನು ಸಂಸತ್ ತಿರಸ್ಕರಿಸಿರುವ ವರದಿಗಳಿಂದಾಗಿ, ಅಮೆರಿಕ ಶೇರುಪೇಟೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ.
ಬುಷ್ ಪ್ರಸ್ತಾಪಕ್ಕೆ ಅಮೆರಿಕ ಸಂಸತ್ ಒಪ್ಪಿಗೆ ಸೂಚಿಸಿದರೆ ಅಮೆರಿಕ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದಾಗಿ ಬುಷ್ ಆಡಳಿತವು ಮನಗಂಡಿತ್ತು. ಆದರೆ, ಆ ಬೆಳವಣಿಗೆಯಿಂದಾಗಿ ಅಮೆರಿಕ ಆರ್ಥಿಕತೆ ಮತ್ತಷ್ಟು ಕುಸಿತ ಕಾಣುವ ಭೀತಿ ಎದುರಾಗಿದೆ. |
|