ಒರಿಸ್ಸಾ ಮತ್ತು ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ "ನರಮೇಧ" ನಡೆದಿದೆ ಎಂದು ಹೇಳಿರುವ ಐರೋಪ್ಯ ಒಕ್ಕೂಟವು, ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಸ್ತುಶಃ ತರಾಟೆಗೆ ತೆಗೆದುಕೊಂಡಿದೆ.
ಒರಿಸ್ಸಾದ ಕಂಧಮಾಲ್ ಹಿಂಸಾಚಾರ ಮತ್ತು ಕರ್ನಾಟಕದಲ್ಲಿ ನಡೆದ ಚರ್ಚ್ ಮೇಲಿನ ದಾಳಿ ವಿಷಯವು ಇಲ್ಲಿ ನಡೆಯುತ್ತಿರುವ ಐರೋಪ್ಯ ಒಕ್ಕೂಟದ ಸಮಾವೇಶದಲ್ಲಿ ಸೋಮವಾರ ಚರ್ಚೆಯ ವಿಷಯವಾಯಿತು.
ಐರೋಪ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಜೋಸ್ ಮ್ಯಾನ್ಯುಯಲ್ ಬರೋಸೋ ಅವರು ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕೋಜಿ, ಭಾರತದಲ್ಲಿ ನಡೆಯುತ್ತಿರುವ ಕ್ರಿಶ್ಚಿಯನ್ನರ "ನರಮೇಧ"ವನ್ನು ಫ್ರಾನ್ಸ್‌ನಲ್ಲಿ ಸಿಖ್ಖರ ವಿರುದ್ಧ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿರುವ ತಾರತಮ್ಯ ನೀತಿಗೆ ಹೋಲಿಸಬಹುದು ಎಂಬ ವಾದವನ್ನು ತಳ್ಳಿ ಹಾಕಿದರು. ಕ್ರಿಶ್ಚಿಯನ್-ವಿರೋಧಿ ಹಿಂಸಾಚಾರವನ್ನು 'ರಾಷ್ಟ್ರೀಯ ಅವಮಾನ' ಎಂದು ಖಂಡಿಸಿರುವ ಪ್ರಧಾನಿ ಸಿಂಗ್ ಅವರನ್ನು ಸರ್ಕೋಜಿ ಶ್ಲಾಘಿಸಿದರಾದರೂ, ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ತಾರತಮ್ಯ ನೀತಿಯ ಕುರಿತು ಉಭಯ ರಾಷ್ಟ್ರಗಳು ಭಿನ್ನ ಅಭಿಪ್ರಾಯವನ್ನೇ ಹೊಂದಿದ್ದವು.
ತಮ್ಮ ಉತ್ತರದಲ್ಲಿ ಪ್ರಧಾನಿ ಸಿಂಗ್, ಕೆಲವೊಂದು 'ಸಣ್ಣಪುಟ್ಟ ಘಟನೆಗಳು' ನಡೆದಿದ್ದು, ಅಲ್ಪಸಂಖ್ಯಾತರು 'ತಮ್ಮ ಶ್ರದ್ಧೆಯ ಪ್ರಸಾರ ಮತ್ತು ಪ್ರತಿಪಾದನೆ' ಕುರಿತ ಸಾಂವಿಧಾನಿಕ ಹಕ್ಕು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದರು. ಸಿಂಗ್ ಉತ್ತರಕ್ಕೆ ಸರ್ಕೋಜಿ ಮತ್ತು ಬರೋಸೋ ತೃಪ್ತಿ ಸೂಚಿಸಿದರು.
ಆದರೆ, ಫ್ರಾನ್ಸ್ ಶಾಲೆಗಳಲ್ಲಿ ಸಿಖ್ ವಿದ್ಯಾರ್ಥಿಗಳು ಟರ್ಬನ್ (ಪೇಟ) ಧರಿಸುವುದನ್ನು ನಿಷೇಧಿಸಿರುವ ಕುರಿತ ಪ್ರಶ್ನೆಗೆ ಸರ್ಕೋಜಿ ನಿರುತ್ತರರಾದರು. "ಕ್ರಿಶ್ಚಿಯನ್ನರ ನರಮೇಧ ಮತ್ತು ಟರ್ಬನ್ ವಿಷಯಗಳು ಒಂದೇ ರೀತಿಯದಲ್ಲ" ಎಂದು ನುಣುಚಿಕೊಂಡ ಅವರು, ಸಿಖ್ಖರು ಫ್ರೆಂಚ್ ಗಣರಾಜ್ಯದ ನಿಯಮಾವಳಿಗಳಿಗೆ ಬದ್ಧತೆ ಪ್ರದರ್ಶಿಸಬೇಕು ಎಂದು ನುಡಿದರು.
ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಣ ಹಳಸಿದ ಸಂಬಂಧಕ್ಕೆ ಒಂದು ಇತಿಹಾಸವೇ ಇದೆ. 2002ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕಾಗಿ 'ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ' ಎಂದು ಡೆನ್ಮಾರ್ಕ್ ಪ್ರಧಾನಿ ಆಂಡ್ರೆಸ್ ರಾಸ್ಮುಸೇನ್ ಅವರಿಂದ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ವಾಜಪೇಯಿ ಅವರು ಬಲವಾದ ಪ್ರತ್ಯುತ್ತರ ನೀಡಿ ಅವರ ಬಾಯಿ ಮುಚ್ಚಿಸಿದ್ದರು. |
|