ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ತಿರಸ್ಕರಿಸಿದ್ದು,ಈಗಾಗಲೇ ಆರೋಗ್ಯ ತಪಾಸಣೆ ಅಂಗವಾಗಿ ವಿದೇಶಕ್ಕೆ ತೆರಳಲು ಸರ್ಕಾರದ ತಾತ್ಕಾಲಿಕ ಆದೇಶದನ್ವಯ ಅವರನ್ನು ಬಿಡುಗಡೆ ಮಾಡಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಆ ನಿಟ್ಟಿನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಪೀಠದ ನ್ಯಾಯಾಧೀಶರುಗಳಾದ ಶೇಕ್ ರೆಜ್ವಾನ್ ಅಲಿ ಮತ್ತು ಎಂ.ರಾಯ್ಸ್ ಉದ್ದೀನ್ ಅವರು, ಸುಮಾರು 90ನಿಮಿಷಗಳ ತೀರ್ಪನ್ನು ಘೋಷಿಸಿ,ಶೇಕ್ ಅವರಿಗೆ ಜಾಮೀನಿನ ಅಗತ್ಯ ಸದ್ಯಕ್ಕಿಲ್ಲ, ಯಾಕೆಂದರೆ ಈಗಾಗಲೇ ಅವರು ತಾತ್ಕಾಲಿಕವಾಗಿ ಮಧ್ಯಂತರ ಬಿಡುಗಡೆ ಮೇಲೆ ವಿದೇಶದಲ್ಲಿರುವುದಾಗಿ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.
ಹಸೀನಾ ಅವರು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇಕ್ ಅವರು ಬಾಂಗ್ಲಾದ ಉದ್ಯಮಿ ನೂರ್ ಅಲಿ ಅವರು 5ಕೋಟಿ ಟಾಕಾ ಹಣವನ್ನು ಸುಲಿಗೆ ಮಾಡಿರುವ ಆರೋಪದ ವಿರುದ್ಧ ಜಾಮೀನು ಅರ್ಜಿ ಸಲ್ಲಿಸಿದ್ದರು.
ಆದರೆ ನ್ಯಾಯಾಲಯ ಟೆಕ್ನಿಕಲ್ ಗ್ರೌಂಡ್ ನೆಲೆಯಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.
ಆದರೂ ಶೇಕ್ ಅವರ ಬಿಡುಗಡೆಯ ಜಾಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ವೊಚ್ಚನ್ಯಾಯಾಲಯದ ಮೆಟ್ಟಿಲೇರುವುದಾಗಿ ಶೇಕ್ ಅವರ ನ್ಯಾಯವಾದಿ ರಫೀಕ್ ಉಲ್ ಹಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |
|