ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ರೂವಾರಿ ಎಂದು ಶಂಕಿಸಲಾದ ಪಾಕಿಸ್ತಾನದಲ್ಲಿನ ತಾಲಿಬಾನ್ ಉಗ್ರಗಾಮಿ ಪಡೆ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಅಸೌಖ್ಯದಿಂದ ಮೃತಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಡಯಾಬಿಟೀಸ್ ಮತ್ತು ಇತರ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಪಾಕಿಸ್ತಾನ ತೆಹ್ರಿಕ್-ಇ-ತಾಲಿಬಾನ್ ಮುಖ್ಯಸ್ಥ ಮೃತಪಟ್ಟಿರುವುದಾಗಿ ಅಧಿಕೃತ ಮೂಲಗಳ ಹೇಳಿರುವುದನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿವೆ.
ಡಯಾಬಿಟೀಸ್‌ನಿಂದ ಬಳಲುತ್ತಿರುವ ಮೆಹ್ಸೂದ್ ಕಳೆದ ಮೂರು ವಾರಗಳಿಂದ ಹಾಸಿಗೆ ಹಿಡಿದಿದ್ದು, ಇದು ತಾಲಿಬಾನ್ ನಾಯಕರಲ್ಲಿ ಆತಂಕ ಮೂಡಿಸಿತ್ತು ಎಂದು ಈ ವಾರ ಪ್ರಾರಂಭದಲ್ಲಿ ನ್ಯೂಸ್ ಡೈಲಿ ವರದಿ ಮಾಡಿತ್ತು. ಮೆಹ್ಸೂದ್ ಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ವಜೀರಿಸ್ತಾನದ ಮಕೀನ್ ಬುಡಕಟ್ಟು ಪ್ರದೇಶದಲ್ಲಿ ಉನ್ನತ ಉಗ್ರ ನಾಯಕರು ಸಭೆಯನ್ನು ನಡೆಸಿದ್ದಾಗಿ ವರದಿಯಾಗಿತ್ತು.
ಕೆಲವು ತಿಂಗಳುಗಳ ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದ ಮೆಹ್ಸೂದ್ ಕೋಮಾ ಸ್ಥಿತಿಗೂ ತಲುಪಿದ್ದ. ಈತನ ಸ್ಥಿತಿಯು ಎಷ್ಟು ಗಂಭೀರವಾಗಿತ್ತೆಂದರೆ, ತಾಲಿಬಾನ್ ನಾಯಕರು, ನೂತನ ತಾಲಿಬಾನ್ ಮುಖ್ಯಸ್ಥ ಸ್ಥಾನಕ್ಕಾಗಿ ಅಭ್ಯರ್ಥಿಯ ಆಯ್ಕೆ ಮಾಡುವ ನಿರ್ಧಾರವನ್ನೂ ಕೈಗೊಂಡಿದ್ದರು. ಆದರೆ, ಮೆಹ್ಸೂದ್ ನಂತರ ಚೇತರಿಕೆ ಕಂಡಿದ್ದ.
ಆದರೆ, ಈ ಬಾರಿ ಮೆಹ್ಸೂದ್ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿ, ಅಧಿಕ ಸಕ್ಕರೆ ಮಟ್ಟದಿಂದಾಗಿ ಕಿಡ್ನಿ ವಿಫಲವಾಗಿದೆ ಎಂದು ಮೂಲಗಳು ಹೇಳಿರುವುದನ್ನು ನ್ಯೂಸ್ ವರದಿ ಮಾಡಿತ್ತು.
ಮೆಹ್ಸೂದ್, ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಜತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ಎಂಬುದಾಗಿಯೂ ವರದಿಯಾಗಿತ್ತು. |
|