ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ತನ್ನ ನೆಲೆಯನ್ನು ವೃದ್ಧಿಗೊಳಿಸುತ್ತಿರುವ ಅಲ್‌ಖೈದಾ ಸಂಘಟನೆಯು ಅಮೆರಿಕ ರಾಷ್ಟ್ರೀಯ ಭದ್ರತೆಗೆ ನಿಜವಾದ ಬೆದರಿಕೆಯಾಗಿದೆ ಎಂದು ಅಮೆರಿಕ ಕೇಂದ್ರ ಗುಪ್ತಚರ ಇಲಾಖೆ(ಸಿಐಎ) ನಿರ್ದೇಶಕ ಮೈಕೆಲ್ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಅಲ್‌ಖೈದಾವು ಅಮೆರಿಕಕ್ಕೆ ಅಪಾಯವನ್ನು ಉಂಟುಮಾಡಲಿದ್ದು, ಇದೊಂದು ನೈಜ ಬೆದರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 11ರ ದಾಳಿಯ ನಂತರ, ಅಮೆರಿಕ ಗುಪ್ತಚರ ಸಂಸ್ಥೆಯು ಪಾಕಿಸ್ತಾನದಲ್ಲಿರುವ ಅಫಘಾನಿಸ್ತಾನ ಗಡಿಭಾಗದ ಮೇಲೆ ಕಣ್ಣಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ಮೂರು ವರ್ಷಗಳಲ್ಲಿ ಇದ್ದುದಕ್ಕಿಂತ ಪ್ರಸಕ್ತ, ಅಲ್‌ಖೈದಾ ಸಂಘಟನೆಯು ಬಲಗೊಂಡಿದ್ದು, ಪಾಕಿಸ್ತಾನ ಬುಡಗಟ್ಟು ಪ್ರದೇಶಗಳು ಅಲ್‌ಖೈದಾದ ಸುರಕ್ಷಿತ ಪ್ರದೇಶಗಳಾಗಿವೆ. ಇದು, ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಅಮೆರಿಕ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಿಗೆ ಅಪಾಯವನ್ನು ತಂದೊಡ್ಡುತ್ತದೆ ಎಂದು ಹೇಡನ್ ಸ್ಪಷ್ಟಪಡಿಸಿದ್ದಾರೆ.
ಬಿನ್ ಲಾಡೆನ್‌ನನ್ನು ಸೆರೆ ಹಿಡಿಯಲು ವಿಫಲವಾಗಿರುವ ಬಗ್ಗೆ ಮತ್ತು ನಿರಂತರ ಭಯೋತ್ಪಾದನೆ ದಾಳಿಯ ಕುರಿತಾದ ಮಂದ ಪ್ರತಿಕ್ರಿಯೆಯ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆಯ ಮೇಲೆ ಟೀಕಾಪ್ರಹಾರವೇ ಹರಿದುಬರುತ್ತಿದ್ದು, ಏನೇ ಆದರೂ, ಸೆಪ್ಟೆಂಬರ್ 11ರ ದಾಳಿಯ ಮುನ್ನ ಇರುವುದಕ್ಕಿಂತ ಪ್ರಸಕ್ತ ಅಮೆರಿಕ ಗುಪ್ತಚರ ಸಂಸ್ಥೆಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಡನ್ ಹೇಳಿದ್ದಾರೆ. |
|