ಸುಮಾರು ಎರಡೂವರೆ ಗಂಟೆಗಳ ಚರ್ಚೆಯ ನಂತರ, 100 ಸದಸ್ಯರನ್ನೊಳಗೊಂಡ ಅಮೆರಿಕ ಸೆನೆಟ್ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಅನುಮೋದನೆ ನೀಡಿದೆ.ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ 86-13 ಅಂತರದಲ್ಲಿ ಅನುಮೋದನೆ ಲಭಿಸಿದ್ದು, ಈ ಮೂಲಕ ಕಳೆದ 30 ವರ್ಷಗಳಿಂದ ಅಣುಬಂಧಕ್ಕೆ ಹೇರಿದ್ದ ನಿಷೇಧಕ್ಕೆ ತೆರೆ ಬಿದ್ದಂತಾಗಿದೆ.ಅಣುಬಂಧದ ಕುರಿತಂತೆ ಭಾರತ ಈಗಾಗಲೇ ಎರಡು ಕ್ಲಿಷ್ಟಕರ ಹಂತವನ್ನು ಯಶಸ್ವಿಯಾಗಿ ದಾಟಿದ್ದು, ಭಾನುವಾರ ಅಮೆರಿಕ ಪ್ರಜಾಪ್ರತಿನಿಧಿ ಸಭೆ ಕೂಡಾ 298-117 ಮತಗಳ ಅಂತರದಲ್ಲಿ ಅನುಮೋದನೆ ನೀಡಿತ್ತು. ಈಗ ಐತಿಹಾಸಿಕ ಒಪ್ಪಂದದ ಅಂತಿಮ ಹಂತವಾದ ಅಮೆರಿಕ ಕಾಂಗ್ರೆಸ್‌ನಲ್ಲಿ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ದೊರೆತಿರುವುದು ಭಾರತ ಮತ್ತು ಅಮೆರಿಕಕ್ಕೆ ಒಂದು ಐತಿಹಾಸಿಕ ಗೆಲುವಾಗಿದೆ.ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ಭಾರತ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗೆ ಶುಕ್ರವಾರ ದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ನವದೆಹಲಿಯಲ್ಲಿ ಒಪ್ಪಂದಕ್ಕೆ ಅಧಿಕೃತ ಸಹಿ ಹಾಕುವ ಕಾರ್ಯಕ್ರಮವು ನಡೆಯುವ ಸಾಧ್ಯತೆ ಇದೆ.ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆಡಳಿತಾವಧಿ ಜನವರಿ 20ಕ್ಕೆ ಅಂತ್ಯಗೊಳ್ಳಲಿದ್ದು, ತಾವು ಅಧಿಕಾರದ ಗದ್ದುಗೆಯಿಂದ ಕೆಳಕ್ಕಿಳಿಯುವ ಮುನ್ನ ಅಣು ಒಪ್ಪಂದಕ್ಕೆ ಅಂಕಿತ ಬೀಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಬುಷ್ ಹೊಂದಿದ್ದರು. ಈ ಒಪ್ಪಂದ ಅನುಮೋದನೆಯಿಂದಾಗಿ ಅವರ ಆಸೆಯು ಕೈಗೂಡಿದಂತಾಗಿದೆ.ಅಮೆರಿಕದೊಂದಿಗಿನ ಅಣುಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಸರಕಾರದಿಂದ ತಮ್ಮ ಬಾಹ್ಯ ಬೆಂಬಲ ಹಿಂತೆಗೆದುಕೊಂಡಿದ್ದರೂ, ಸಂಸತ್‌ನಲ್ಲಿನ ವಿಶ್ವಾಸಮತದಲ್ಲಿ ಜಯಗಳಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಇದೊಂದು ಐತಿಹಾಸಿಕ ಗೆಲುವಾಗಿದೆ. |
ಸಂಬಂಧಿತ ಮಾಹಿತಿ ಹುಡುಕಿ |
|